ದೇವ - ದೇವತೆಗಳು

ಮಾನವ ಸಂಸ್ಕøತಿಯ ವಿಕಾಸದಲ್ಲಿ ದೇವ ದೇವತೆಗಳ ಕಲ್ಪನೆ ಹೇಗೆ ಮೂಡಿಬಂದಿತು ಎಂಬುದು ಸ್ವಾರಸ್ಯವಾದ ಅಧ್ಯಯನ. ಎಲ್ಲ ಮಾನವರಿಗೂ ಮೂಲಪುರುಷವಾದ. ಮನುಷ್ಯನ ಪ್ರವೃತ್ತಿಗಳನ್ನು ನಿಯಂತ್ರಣಮಾಡುವ, ಸರ್ವಶಕ್ತನಾದ, ಜನರಿಗೆ ಸದ್ಗತಿ ದುರ್ಗತಿಗಳನ್ನು ನಿಶ್ಚಿಯಿಸುವ ದೇವರ ಕಲ್ಪನೆ ಅನಾದಿಕಾಲದಿಂದಲೂ ಪ್ರವೃತ್ತವಾಗಿವೆ. ಭಾರತದಲ್ಲಿ ಪ್ರಕೃತಿಯ ಪ್ರವೃತ್ತಿಗಳಿಗೆ ದೇವತ್ವದ ಮೆರುಗು ಕೊಟ್ಟು ಹೊಗಳುವ ಸಂಪ್ರದಾಯ ಋಗ್ವೇದದಲ್ಲೇ ಕಾಣುತ್ತದೆ. ಪ್ರಕೃತಿಪೂಜೆ ಜಗತ್ತಿನ ಎಲ್ಲ ಪ್ರಾಚೀನ ಧರ್ಮಗಳಲ್ಲಿಯೂ ಒದಗಿ ಬಂದಿವೆ. ವೈದಿಕ ಧರ್ಮದ ದ್ಯೌಸ್, ಮರತ್ತುಗಳು, ಇಂದ್ರ, ಅಗ್ನಿ, ವರಣ, ಬೃಹಸ್ಪತಿ, ಯಮ, ಪೂಷ, ಬರ್ಗ, ಉಷಸ್ ಮುಂತಾದ ದೇವತೆಗಳು ಪ್ರಕೃತಿನಿಯಮಗಳ ಆವಿಷ್ಕರಣಗಳು ಎನ್ನಬಹುದು. ವೈದಿಕ ಋಷಿಗಳು ಪ್ರಕೃತಿಯ ನಿಯಮವನ್ನು ಋತ ಎಂದು ಕರೆದು ಅದನ್ನು ವ್ಯವಸ್ಥೆ ಮಾಡುವ ಕೆಲಸ ದೇವತೆಗಳದ್ದು ಎಂಬ ಕಲ್ಪನೆಯನ್ನು ಮೂಡಿಸಿದರು. ವರಣನನ್ನು ಋತಸ್ಯಗೋಪ್ತನೆಂದೂ ಉಷಸ್ಸನ್ನು ಋತಸ್ಯ ಯೋಷಾ ಎಂದು ಋತಾವರೀ ಎಂದು ಬಣ್ಣಿಸುತ್ತಾರೆ. ಪ್ರಕೃತಿಯಲ್ಲಿರುವ ಋತ ಮನುಷ್ಯನಲ್ಲಿ ಧರ್ಮವಾಗಿ ಪ್ರತಿಫಲಿಸುತ್ತದೆ. ಋತಕ್ಕೂ ಧರ್ಮಕ್ಕೂ ಸಮನ್ವಯ ಮಾಡುವುದು ಮನುಷ್ಯನ ಕರ್ತವ್ಯ. ಈ ದೃಷ್ಟಿಯಿಂದ ಪ್ರಾಕೃತಿಕ ದೇವರುಗಳ ಆರಾಧನೆ, ಸ್ತೋತ್ರ, ಯಜ್ಞಯಾಗಾದಿ ಸಮಾರಂಭಗಳು ಪ್ರವೃತ್ತವಾದುವು. ದೇವತೆಗಳು ಹಲವಾರು ಇದ್ದವರು ವೈದಿಕಯುಗ ಮುಗಿಯುವ ವೇಳೆಗೆ ಒಂದೇ ದೇವರ ಹಲವು ಪ್ರಕಾರಗಳಾದರು. ಏಕಂ ಸದ್ಪಿಪ್ರಾಬಹುದಾ ವದಂತಿ ಎನ್ನುವ ಮಾತು ಪ್ರಾಚೀನ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ದೇವತೆಗಳಿಗೆ ಸ್ಪಷ್ಟವಾದ ಆಕಾರ ಉಪಲಬ್ಧವಾಗುವ ಪ್ರವೃತ್ತಿ ಮೊದಲಾದರೂ ಆಧ್ಯಾತ್ಮಿಕ ತತ್ತ್ವಗಳನ್ನು ದೇವರಂತೆ ಗ್ರಹಿಸಿವುದೂ ಉಂಟು. ನಿದರ್ಶನಕ್ಕೆ ಅದಿತಿ (ಮೇರೆಯಿಲ್ಲದುದು), ಪ್ರಜಾಪತಿ (ಪ್ರಾಣಿಗಳ ಒಡೆಯ), ಹಿರಣ್ಯಗರ್ಭ ಮುಂತಾದ ದೇವತೆಗಳು. ಒಂದೊಂದು ಕಾಲದಲ್ಲಿ ಒಂದೊಂದು ದೇವತೆ ಪ್ರಧಾನನಾಗಿ ಪೂಜೆಗೊಳ್ಳುತ್ತಾನೆಂಬ ಕಲ್ಪನೆಯೂ ವೈದಿಕಧರ್ಮದಲ್ಲಿ ಕಾಣುತ್ತದೆ. ಇದಕ್ಕೆ ಹೀನೋತೀ ಇಸಂ ಎಂಬ ಅಭಿದಾನ ಬಳಕೆಯಲ್ಲಿದೆ. ಇದರಿಂದ ಅನುಕ್ರಮವಾಗಿ ಏಕೇಶ್ವರವಾದ ಪ್ರವೃತ್ತವಾಯಿತು. ದರ್ಶನಯುಗ ಆರಂಭವಾದಾಗ ದೇವರ ಕಲ್ಪನೆಗೆ ತಾತ್ತ್ವಿಕವಾದ, ಆಧ್ಯಾತ್ಮಿಕವಾದ ಅರ್ಥ ನಿಷ್ಪತ್ತಿಯಾಗತೊಡಗಿತ್ತು. ಜಗತ್ತಿಗೂ ದೇವರಿಗೂ ಇರುವ ಸಂಬಂಧ, ಜನಗಳಿಗೂ ದೇವರಿಗೂ ಇರುವ ಸಂಬಂಧ, ಕರ್ಮ, ಭಕ್ತಿ ಜ್ಞಾನಗಳ ಪಾತ್ರ ಇತ್ಯಾದಿ ಸಮಸ್ಯೆಗಳು ಉದ್ಭೂತವಾದುವು. ಇಡೀ ವಿಶ್ವಕ್ಕೆ ಕಾರಣವಾದ ಬ್ರಹ್ಮನನ್ನು ನಿರಾಕಾರಮ, ನಿರ್ಗುಣ, ನಿರಾವಲಂಬನೆಂದು ಬಣ್ಣಿಸಿ ಜಗತ್ತು ಅವನ ಲೀಲೆಯೆಂದೂ ಮಾಯೆಯೆಂದೂ ಶರೀರವೆಂದೂ ವಿವರಿಸಿ, ಮನುಷ್ಯನ ಆತ್ಮಕ್ಕೂ ಬ್ರಹ್ಮಕ್ಕೂ ತಾದಾತ್ಮ್ಯವನ್ನೋ ಅಂಶ - ಅಂಶಿ ಭಾವವನ್ನೋ ಬಿಂಬ - ಪ್ರತಿಬಿಂಬ ಭಾವವನ್ನೋ ಸ್ವಾಮಿ - ದಾಸ ಸಂಬಂಧವನ್ನೋ ಹೇಳುವುದು ವೇದಾಂತದ ದೃಷ್ಟಿಭೇದದಿಂದ ಉಂಟಾಯಿತು. ಆದರೆ ನಿತ್ಯವ್ಯವಹಾರದಲ್ಲಿ ಅನೇಕ ದೇವತೆಗಳನ್ನು ಆರಾಧಿಸಿವ ಪದ್ಧತಿ ದೇಶಾದ್ಯಂತ ಪ್ರಚಲಿತವಾಗಿದೆ. ಈ ದೇವತೆಗಳಿಗಾಗಿ ದೇವಾಲಯಗಳನ್ನು ಕಟ್ಟಿಸಿ ಅಲ್ಲಿ ನಿತ್ಯನೈಮಿತ್ತಿಕ, ಅವಸರ ವಿಶೇಷ ಪೂಜೆಗಳನ್ನು ನಡೆಸುತ್ತಾರೆ. ಮೀಮಾಂಸ, ಸಾಂಖ್ಯ, ಯೋಗ, ಅದ್ವೈತ ವೇದಾಂತ, ಹೀನಯಾನ ಬೌದ್ಧ ಪಂಥ - ಇವುಗಳು ದೇವರ ಪಾತ್ರವನ್ನು ಕಡಿಮೆಮಾಡಿ ಆರಾಧನೆಯ ಅಗತ್ಯವನ್ನು ಗೌಣವೆಂದವು. 12 ನೆಯ ಶತಮಾನದಲ್ಲಿ ಬಂದ ರಾಮಾನುಜಾಚಾರ್ಯರಿಂದಾಗಿ ಮತ್ತೆ ಭಗವದಾರಾಧನೆಯ ಆಂದೋಳನ ಆರಂಭವಾಯಿತು. ಅಲ್ಲಿಂದ ಮುಂದೆ ರಾಮಾನಂದ, ಕಬೀರ, ತುಳಸೀದಾಸ, ಮುಂತಾದವರು ದೇವರ ಕಲ್ಪನೆಯನ್ನು ರೂಢಿಸಿದರು. ಇಂದಿಗೆ ದಾರ್ಶನಿಕ ಜ್ಞಾನವೇ ಪ್ರಮುಖವಾದ ಆರಾಧನೆ. ಭಕ್ತಿಪುರಸ್ಸರವಾದ ಪೂಜೆ ಪ್ರಕೃತಿ ಪೂಜೆ, ಇವಲ್ಲದೆ ಸಾವಿರಾರು ಕ್ಷುದ್ರ ದೇವತೆಗಳ ದೈವಗಳ ಪೂಜೆಯೂ ಬಳಕೆಯಲ್ಲಿವೆ. ಈಶ್ವರ (ಒಡೆಯ) ಎಂಬ ಭಾವನೆಯಿಂದ ರಾಮ, ಕೃಷ್ಣ, ಶಿವ, ವಿಷ್ಣು, ಕಾಳಿ, ದುರ್ಗೆ, ಲಕ್ಷ್ಮಿ, ಸರಸ್ವತಿ, ಗಣೇಶ, ಸುಬ್ರಹ್ಮಣ್ಯ ಮುಂತಾದ ರೂಪಗಳಲ್ಲಿ ಅರ್ಚಿಸುವ ಸಂಪ್ರದಾಯವಿದೆ. 

ಹಿಂದೂಗಳ ದೇವತೆಗಳಲ್ಲಿ ಬ್ರಹ್ಮ ಒಂದು ಕಾಲಕ್ಕೆ ವಿಶಿಷ್ಟನಾಗಿದ್ದ ದೇವತೆ; ಆದರೆ ಈಗ ಆತನ ಪೂಜೆ ಹಿಂದೆ ಬಿದ್ದಿದೆ. ರಾಜಪುತಾನದ ಪುಷ್ಕರ ಎಂಬಲ್ಲಿ ಇರುವ ಬ್ರಹ್ಮನ ದೇವಾಲಯವನ್ನು ಬಿಟ್ಟರೆ ದೇಶದಲ್ಲಿ ಇನ್ನೆಲ್ಲೂ ಬ್ರಹ್ಮನಿಗೆ ಪೂಜೆಯಿಲ್ಲ, ಗುಜರಾತಿನ ಮಾಹಿಕಾಂಠ ಎಂಬಲ್ಲಿಯೂ ಬ್ರಹ್ಮನ ಗುಡಿ ಇದ್ದಿತೆಂದು ಹೇಳುತ್ತಾರೆ. ಪ್ರಕೃತಿಯಲ್ಲಿ ಒದಗಿಬರುವ ಅನಿವಾರ್ಯದ ಬದಲಾವಣೆಗಳಿಗೆ ಮೂರ್ತರೂಪ ಕೊಟ್ಟು ಅದಕ್ಕೆ ಅಧಿಷ್ಠಾತೃ ದೇವತೆಯೆಂದು ಶಿವನ ಕಲ್ಪನೆ ವೈದಿಕಯುಗದಿಂದ ಬಂದಿದೆ. ಭೂತನಾಥನೆಂದೂ ಪ್ರೇತಗಳಿಗೆ ಒಡೆಯನೆಂದೂ ಯಕ್ಷಪಿಶಾಚಗಂಧರ್ವಕಿನ್ನರ ಮುಂತಾದ ಅಲೌಕಿಕ ದೈವಗಳಿಗೆ ಒಡೆಯನೆಂದೂ ಅನಾರ್ಯರ ಕಲ್ಪನೆಯಿದ್ದುದು ಈ ಶಿವನ ಆರ್ಯಕಲ್ಪನೆಯಲ್ಲಿ ಅತಂರ್ಗತವಾಯಿತು. ವೇದದ ರುದ್ರ ಶುಭವೂ ಅಶುಭವೂ ಹೌದು; ಎಂದೇ ಮಂಗಳ (ಶಿವ) ಕರನಾದ ಶಿವ ಶ್ಮಶಾನವಾಸಿ, ಕಿರಾತ, ರುಂಡಮಾಲಾಧರಮ ಗಂಗಾಧರ, ಚಂದ್ರಚೂಡ ಇತ್ಯಾದಿ ಮಂಗಳ - ಅಮಂಗಳ ಕಲ್ಪನೆಗಳ ಸಂಯೋಗದ ಫಲವಾಗಿ ಮೈದಳೆದಿದ್ದಾನೆ. ಶಿವನ ಪೂಜೆ ಮನುಷ್ಯಾಕೃತಿಯಲ್ಲಿ ನಡೆಯುವುದಿಲ್ಲ. ಲಿಂಗ ಪೂಜೆ ಬಳಕೆಯಲ್ಲಿದೆ. ಮೊದಲು ಸ್ತಂಭಪ್ರತೀಕಗಳನ್ನು (ಕಾಶಿಯಲ್ಲಿರುವ 6 ಅಡಿ ಉದ್ದ 12 ಅಡಿ ಸುತ್ತಳತೆಯಿರುವ ಯಾಜೀಶ್ವರಲಿಂಗ, ಭೂಪಾಲದ  7 1/2' ಉದ್ದ 17 1/2" ಸುತ್ತಳತೆಯ ಭೋಜಪುರಲಿಂಗ ಇತ್ಯಾದಿ) ಪೂಜೆ ಮಾಡುವ ಪದ್ಧತಿ ದ್ರಾವಿಡ ದೇಶದಲ್ಲಿತ್ತು. ಮಹಾಭಾರತದ ಕಾಲದಲ್ಲೇ ಲಿಂಗಪೂಜೆ ಪ್ರಚಲಿತವಾಗಿದ್ದಿತೆಂದು ತಿಳಿದುಬರುತ್ತದೆ. ಈಗ ಶೈವ ಪಂಥದವರು ಶಿವನನ್ನು ಶಿವ ಹೆಂಡತಿಯೆಂದು ಪಾರ್ವತಿಯನ್ನೂ (ಗೌರಿ, ಚಂಡಿ, ಕಾಳಿ) ಶಿವನ ಮಕ್ಕಳೆಂದು ಗಣಪತಿ, ಕಾರ್ತಿಕೇಯ (ಸುಬ್ರಹ್ಮಣ್ಯ, ಕುಮಾರಸ್ವಾಮಿ) ಇವರನ್ನೂ ಶಿವ ವಾಹನವೆಂದು ನಂದಿಯನ್ನೂ ಶಿವನ ಅನುಚರನೆಂದು ಚಂಡಿಕೇಶ್ವರನನ್ನೂ ಪೂಜೆ ಮಾಡುತ್ತಾರೆ. ಶಂಕರಾಚಾರ್ಯರಿಂದ ಸ್ಮಾರ್ತವೈದಿಕ ಸಂಪ್ರದಾಯ ಪ್ರಬಲವಾದಾಗ ಶಿವನ ಪೂಜೆ ವಿಶೇಷವಾಗಿ ಬಳಕೆಗೆ ಬಂದಿತು. ಇಡೀ ದೇಶದಲೆಲ್ಲ ಇಂದು ಮಾಘ ಬಹುಳದಲ್ಲಿ ಶಿವರಾತ್ರಿಯನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಕಾಶಿಯ ವಿಶ್ವೇಶ್ವರಲಿಂಗ, ಉಜ್ಜಯಿನಿಯ ಜ್ಯೋತಿರ್ಲಿಂಗ, ಸೋಮನಾಥಪುರದ ಸೋಮನಾಥಲಿಂಗ, ದಕ್ಷಿಣದ ಜಂಬುಕೇಶ್ವರ, ಅರುಣಾಚಲೇಶ್ವರ, ಚಿದಂಬರ ಆಕಾಶಲಿಂಗ ಮುಂತಾದವು ದೇಶದಲ್ಲಿ ಪ್ರಸಿದ್ಧವಾದ ಶಿವಕ್ಷೇತ್ರದ ದೇವತೆಗಳು. ಶಿವನ ಆರಾಧನೆಯನ್ನೇ ಏಕೈಕ ಧರ್ಮವೆಂದು ಗ್ರಹಿಸಿ ವೈದಿಕ ವಿರುದ್ಧವಾದ ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿರುವ ವೀರಶೈವಪಂಥ ಬಸವಣ್ಣನವರಿಂದ ಪ್ರವರ್ತಿತವಾಯಿತು.

ವಿಷ್ಣುವನ್ನೇ ದೈವವೆಂದು ಗ್ರಹಿಸಿದ ವೈಷ್ಣವರೂ ದೇಶದಲ್ಲಿ ಶೈವರಂತೆ ಬಹು ಸಂಖ್ಯೆಯಲ್ಲಿದ್ದಾರೆ. ವೇದವಾಙ್ಮಯದಲ್ಲಿ ವಿಷ್ಣು ಅಷ್ಟು ಪ್ರಮುಖ ದೇವತೆಯಲ್ಲ. ಮುಂದೆ ಆರ್ಯ ದ್ರಾವಿಡ ಸಂಘಟನೆಯಾದ ಅನಂತರ ವಿಷ್ಣುವಿಗೂ ಕೃಷ್ಣನಿಗೂ ತಾದಾತ್ಮ್ಯ ಸಂಬಂಧವೇರ್ಪಟ್ಟು ವಿಷ್ಣುವಿನ ದಶಾವತಾರಗಳ ಕಲ್ಪನೆ ಬೆಳೆಯಿತು. ಭಾರತದಲ್ಲಿ ವಿಷ್ಣುಪೂಜೆಯನ್ನು ತುಂಬ ಪ್ರಚಾರಮಾಡಿದ ಪ್ರಥಮ ಆಚಾರ್ಯರೆಂದರೆ ರಾಮಾನುಜಚಾರ್ಯರು (ಎಂಬರುಮಾನಾರ್). ಇವರಾದ ಅನಂತರ ವೈಷ್ಣವ ಮತದ ಪ್ರಾಬಲ್ಯಕ್ಕೆ ಕಾರಣಪುರುಷರಾದವರು ಮಧ್ವಾಚಾರ್ಯರು (ಸುಮಾರು 1200). ಉತ್ತರ ಭಾರತದಲ್ಲಿ ವಿಷ್ಣುವಿನ ಪೂಜೆಯನ್ನು ಬಳಕೆಗೆ ತಂದವರು ರಾಮಾನಂದ, ವಲ್ಲಭಾಚಾರ್ಯ, ಗೌರಾಂಗ ಅಥವಾ ಕೃಷ್ಣಚೈತನ್ಯ ಮುಂತಾದವರು. ವಿಷ್ಣುವಿನ ಆರಾಧನೆಯಲ್ಲಿ ಅವನ ಹೆಂಡತಿಯೆಂದು ಲಕ್ಷ್ಮಿಯೂ (ಅಥವಾ ರಾಧೆ) ಅವನ ಅವತಾರ ವಿಶೇಷವೆಂದು ಕೃಷ್ಣ, ರಾಮ, ನರಸಿಂಹ ವರಾಹ ಇವರೂ ಪೂಜೆಗೊಳ್ಳುತ್ತಾರೆ. ಶಿವನ ಲೀಲಾಮೂರ್ತಿಗಳು ಇದ್ದಂತೆ ವಿಷ್ಣುವಿಗೆ ಅವತಾರ ಮೂರ್ತಿಗಳು ಇವೆ. 

ಆದಿಕಾರಣವನ್ನು ಶಕ್ತಿಯೆಂದು ಪರಿಗಣಿಸಿ ಸ್ತ್ರೀರೂಪದ ಹಲವುದೇವತೆಗಳನ್ನು ಪೂಜೆ ಮಾಡುವ ಸಂಪ್ರದಾಯವೂ ಭಾರತದಲ್ಲಿ ಪ್ರಚಲಿತವಾಗಿದೆ. ಇದು ಶಾಕ್ತ ಪಂಥ ಎನಿಸಿಕೊಳ್ಳುತ್ತದೆ. ಇದು ಅನಾರ್ಯವಾದ ಪದ್ಧತಿ; ವೈದಿಕ ವಾಙ್ಮಯದಲ್ಲಿ ದ್ಯೌಃ, ಉಷಸ್, ವನಾನಿ, ಅದಿತಿ ಮುಂತಾದ ಸ್ತ್ರೀ ದೇವತೆಗಳ ಉಲ್ಲೇಖವೇನೋ ಇದೆ; ಆದರೆ ಸ್ತ್ರೀ ದೇವತೆಯೇ ಪ್ರಮುಖ, ಪರದೈವ ಎಂದು ಬಗೆದ ಕಲ್ಪನೆ ದ್ರಾವಿಡರಿಂದ ಬಂದುದು ಎಂದು ಹೇಳುತ್ತಾರೆ. ಕಾಳಿ, ದುರ್ಗೆ, ಚಂಡಿ, ಪಾರ್ವತಿ, ಭವಾನಿ, ರಾಜರಾಜೇಶ್ವರಿ, ಲಲಿತಾಪರಮೇಶ್ವರೀ, ದುರ್ಗಾಭಗವತಿ ಮುಂತಾದ ಆರ್ಯೀಕೃತ ದೇವತೆಗಳೂ ಮಾತ್ರವಲ್ಲದೆ ಎಲ್ಲಮ್ಮ, ಮಾರಿಯಮ್ಮ, ಚೌಡಿ, ಮುಂತಾದ ಗ್ರಾಮದೇವತೆಗಳೂ ನಿತ್ಯವೂ ಪೂಜೆಗೊಳ್ಳುತ್ತಿವೆ. ಶಾಕಂಭರಿ ಆಶಾಪೂರ್ಣ, ಅನ್ನಪೂರ್ಣ, ಮಾನಸಾ, ವಿಷಹರೀ (ಪಿಡಾರಿ), ವಿಂಧ್ಯವಾಸಿನೀ, ಕುಮಾರಿ, ಸಪ್ತಮಾತೃಕೆಯರು, ಧಾತ್ರೀ ಮುಂತಾದ ದೇವತೆಗಳು ಜನಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಬಂದಿವೆ. 

ಹಿಂದೂ ದೇವತೆಗಳು ಸಂಶ್ಲಿಷ್ಟರಾಗಿ ಮೂಡಿಬಂದ ಕಲ್ಪನೆಗಳಿವೆ. ಹರಿಹರ (ಶಂಕರ ನಾರಾಯಣ), ಅರ್ಧನಾರೀಶ್ವರ ಮುಂತಾದುವು ನಿದರ್ಶನಗಳು. ಇತಿಹಾಸದ ಒಂದು ಯುಗದಲ್ಲಿ ಶೈವ, ವೈಷ್ಣವ, ಪ್ರಭೇದ ವಿರಸವಾಗಿ ಪರಿಣಮಿಸಿದ ಉಲ್ಲೇಖವಿದ್ದರೂ ನಿತ್ಯಜೀವನದಲ್ಲಿ ಹೊಂದಾಣಿಕೆಯಿದೆ. ಕಾಶಿಯ ವಿಶ್ವೇಶ್ವರ, ಖಾಟ್ಮಂಡುವಿನ ಮಹಾಕಾಲ, ನೇಪಾಳದ ಪಶುಪತಿನಾಥ ಇವು ಶೈವಕ್ಷೇತ್ರಗಳಾದರೂ ಇಲ್ಲಿಗೆ ವೈಷ್ಣವರೂ ಅಧಿಕ ಸಂಖ್ಯೆಯಲ್ಲಿ ಬಂದು ಪೂಜೆ ಮಾಡುತ್ತಾರೆ. ಹಾಗೆಯೇ ಅನಂತಶಯನ, ತಿರುಪತಿ, ಪುರಿ, ಜಗನ್ನಾಥ, ದ್ವಾರಕಾ, ಮಥುರಾ, ಇವೆಲ್ಲ ವೈಷ್ಣವಕ್ಷೇತ್ರಗಳಾದರೂ ಶೈವರೂ ಇಲ್ಲಿಗೆ ಬರುತ್ತಾರೆ. ಗಣೇಶನ ಪೂಜೆ, ಸರಸ್ವತಿಯ ಪೂಜೆ ಎರಡೂ ದೇಶದಾದ್ಯಂತ ಹರಡಿವೆ. ಇದಕ್ಕೆ ಜಾತಿಮತಗಳ ಭೇದವಿಲ್ಲ. ಗಣಪತಿಲಿಂಗ, ಸ್ಫಟಿಕಲಿಂಗ, ವಿಷ್ಣುಶಾಲಿಗ್ರಾಮ - ಇವು ನಿತ್ಯವೂ ಪೂಜೆಗೊಳ್ಳುತ್ತವೆ. ಹನುಮಂತ, ಗರುಡ, ವಿಷ್ವಕ್ಸೇನ - ಇವರೂ ಶೈವ ವೈಷ್ಣವ ಸಂಪ್ರದಾಯಸ್ಥರಿಂದ ಪೂಜೆಗೊಳ್ಳುತ್ತಾರೆ. ಕೇರಳದಲ್ಲಿ ಹರಿಹರಪುತ್ರನೆಂದು ಪ್ರಖ್ಯಾತನಾದ ಅಯ್ಯಪ್ಪನ್ ಅಥವಾ ಶಾಸ್ತಾ ಎಂಬ ದೇವತೆಯ ಪೂಜೆ ಪ್ರಚಲಿತವಾಗಿದೆ. ಈ ದೇವತೆಯ ಅವಾಸಸ್ಥಾನವಾದ ಶಬರಿಮಲೈ ಎಂಬ ಬೆಟ್ಟಕ್ಕೆ ಆ ಪ್ರದೇಶದವರು ಇಡೀ ವರ್ಷ ಯಾತ್ರೆ ಕೈಗೊಳ್ಳುತ್ತಾರೆ. ಸ್ವಾಮಿಯೇ ಶರಣಂ ಅಯ್ಯಪ್ಪಾ ಎಂಬ ಮಂತ್ರವನ್ನು ಪುರಶ್ಚರಣ ಮಾಡುತ್ತ ಬೆಟ್ವವನ್ನು ಹತ್ತುತ್ತಾರೆ. ಮಲೆಯಾಳದಲ್ಲಿ ಶಬರಿಮಲೈ ಇದ್ದಹಾಗೆ ತಮಿಳುನಾಡಿನಲ್ಲಿ ಪಳನಿ; ಈ ಬೆಟ್ಟದ ಮೇಲೆ ಬಾಲಸುಬ್ರಹ್ಮಣ್ಯ ಅಥವಾ ಕುಮಾರಸ್ವಾಮಿಯ (ಪಳನಿಯಾಂಡವನ್) ಮೂರ್ತಿಯಿದೆ. 

ಈ ದೇವತೆಗಳಲ್ಲದೆ ಪ್ರಭಾವಶಾಲಿಗಳಾದ ಸಿದ್ಧರು, ಸಂತರು, ಯತಿಗಳು, ನಾಯಕರು ಇವರ ಸಮಾಧಿಸ್ಥಳಗಳೂ (ಗದ್ದಿಗೆಗಳು, ಬೃಂದಾವನಗಳು). ಪ್ರತೀಕಗಳೂ ದೇವತೆಗಳಂತೆಯೇ ಆರಾಧನೆಗೆ ಪಾತ್ರವಾಗಿರುವುದು ಕಾಣುತ್ತದೆ. ದಕ್ಷಿಣದಲ್ಲಿ ರಾಘವೇಂದ್ರಸ್ವಾಮಿಗಳು, ರಾಮಾನುಜಾಚಾರ್ಯರು, ಶಂಕರಾಚಾರ್ಯರು, ಬಸವಣ್ಣನವರು, ಅಗಡಿ ಸಾಧುಗಳು, ಶಿರ್ಡಿ ಸಾಯಿಬಾಬಾ, ಸಿದ್ಧಾರೂಢಸ್ವಾಮಿಗಳು ಮುಂತಾದವರಿಗೆ ಪೂಜೆ ನಡೆಯುತ್ತದೆ. ಇವರಿಗೆ ಅಷ್ಟೋತ್ತರ, ಧ್ಯಾನಶ್ಲೋಕಗಳೂ ಉಂಟು. ದೇವತೆಗಳಲ್ಲಿ ವರ್ತಿಸುವಂತೆಯೇ ಭಯಭಕ್ತಿಗಳಿಂದ ಜನ ಇವರಲ್ಲೂ ವರ್ತಿಸುತ್ತಾರೆ. ಆರ್ತರು, ಜಿಜ್ಞಾಸುಗಳು, ಅರ್ಥಾರ್ಥಿಗಳು ಎಲ್ಲರಿಗೂ ಇವರ ಅನುಗ್ರಹ ಬೇಕೆಂಬ ಭಾವನೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರರಾದ ನಾಯಕರಿಗೆ ಗುಡಿಗಳನ್ನು ಕಟ್ಟಿ ದೈವಗಳೆಂದು ಪೂಜಿಸುವ ಪದ್ಧತಿ ಉಂಟು. ಕೋಟಿಚೆನ್ನಯ್ಯ, ಕಾಂತಾಬಾರೆ - ಬೂದಾಬಾರೆ, ಬೊಬ್ಬರ್ಯೆ, ಕೋಟಿಪೂಂಜ, ಕೆಂಬೆರ್ಲು, ಕಲ್ಲುರ್ಟಿ ಮುಂತಾದ ಮನುಷ್ಯರ ಪ್ರೇತಗಳು ದೈವಗಳೆಂದೂ ಅವುಗಳ ಪ್ರಭಾವ ಇಂದಿಗೂ ಇದೆಯೆಂದೂ ನಂಬುತ್ತಾರೆ. ಇವುಗಳಲ್ಲದೆ ಚಾಮುಂಡಿ, ಜುಮಾದಿ (ಧೂಮಾವತಿ) ಲೆಕ್ಕೆಸಿರಿ (ರಕ್ತೇಶ್ವರಿ), ಮಹಮ್ಮಾಯೆ, ಭಗವತಿ, ವನದುರ್ಗಿ, ಮುಂತಾದ ದೈವೀಶಕ್ತಿಗಳೂ ಮಲ್ಲರಾಯಿ, ಉಳ್ಳಾಳ್ತಿ, ಕೊಡುಮಣುತಾಯಿ, ಮುಂತಾದ ಅಂಶಗಳು ಪುಲಿ ಚಾಮುಂಡಿ (ಹುಲಿ), ಪಂಜುರ್ಳಿ(ಹಂದಿ) ಮುಂತಾದ ಪಾಶವೀಶಕ್ತಿಗಳೂ ಭೂತಗಳೆಂದು ನಿಂತು ವಿಶೇಷವಾದ ಪೂಜೆ ಪುರಸ್ಕಾರಗಳನ್ನು ಕೊಳ್ಳುತ್ತಿವೆ. ತುಳುವರು ಇವನ್ನು ದೈವ (ದೈಯೊಂ)ಗಳೆನ್ನುತ್ತಾರೆ. ಇವುಗಳಿಗೆ ಕೋಲ, ನೇಮ, ಬಂಡಿಗಳನ್ನು ಸಲ್ಲಿಸುತ್ತಾರೆ. ಪಾಡ್ದನಗಳನ್ನು (ಪ್ರಾರ್ಥನೆ) ಹಾಡುತ್ತಾರೆ. ಸಾನಗಳನ್ನು (ಸ್ಥಾನ) ಕಟ್ಟಿಸುತ್ತಾರೆ. ಈ ದೈವಗಳು ಶಿವನ ಭೂತಗಣಗಳಿಗೆ ಸೇರಿದವು.

ನಾಡಿನಾದ್ಯಂತ ಪ್ರಚಲಿತವಾದ ಪೂಜೆಯೆಂದರೆ ನಾಗಪೂಜೆ. ಭಾರತದಲ್ಲಿ ಮಾತ್ರವಲ್ಲ ಪ್ರಂಪಚದ ಬಹುಕಡೆ ಸರ್ಪಗಳನ್ನು ಪೂಜಿಸುವ ಪದ್ಧತಿ ಇದ್ದುದು ಕಂಡುಬರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗನನ್ನು ಸುಬ್ರಮಣ್ಯನೆಂದು ವ್ಯವಹರಿಸಿ ವಾಸುಕಿಯ ಅವತಾರವಿಶೇಷವೆಂದು ಗ್ರಹಿಸಿ ನಾಗಾಲಯಗಳನ್ನು ನಿರ್ಮಿಸಿರುತ್ತಾರೆ. ಪರಶುರಾಮ ನಿರ್ಮಿಸಿದನೆನ್ನಲಾದ ಕಡಲಂಚಿನ ಕೇರಳ, ತುಳುನಾಡು, ಕೊಂಕಣ ಇಲ್ಲೆಲ್ಲ ನಾಗಾರಾಧನೆ ತುಂಬ ಪ್ರಚಲಿತವಾಗಿದೆ. ಹಾವು ಮಾತ್ರವಲ್ಲದೆ ಹಸುವನ್ನೂ ಪೂಜಿಸುವ ಪದ್ಧತಿಯಿದೆ. ಗಿಡಮರಗಳಲ್ಲಿ ಅಶ್ವತ್ಥ, ಭೋದಿವೃಕ್ಷ, ಶಮೀ, ಅಪಮಾರ್ಗ- ಇವು ಪೂಜೆಗೆ ಪಾತ್ರವಾಗಿವೆ. ಇವುಗಳನ್ನೆಲ್ಲ ದೇವತೆಗಳೆಂದೋ ದೇವತೆಗಳ ಆವಾಸವೆಂದೂ ಬಣ್ಣಿಸುತ್ತಾರೆ. ಹಿಂದುಗಳು ಹಲವಾರು ಬೆಟ್ಟಗಳನ್ನು ದೇವಾತ್ಮವೆಂದು ಬಗೆದಿದ್ದಾರೆ. ಹಿಮಾಲಯ, ಶ್ರೀಶೈಲ, ಪಳನಿ, ಶತ್ರುಂಜಯ, ಶಬರಿಮಲೆ, ಇವೆಲ್ಲ ನಿದರ್ಶನಗಳು. ಗ್ರೀಕ್‍ಜನ ಒಲಿಂಪಸ್ ಬೆಟ್ಟವನ್ನು ಹೀಗೆಯೇ ಪರಿಗಣಿಸಿದ್ದರು. ಸ್ಥಾವರ ವಸ್ತುಗಳಲ್ಲಿ ವಿಶೇಷ ಧರ್ಮವಿದ್ದರೆ ಅವನ್ನು ಜಂಗಮವಾದ ಚೇತನಗಳಿಗೆ ಆಕರವೆಂಬ ಭಾವನೆ ಈ ದೃಷ್ಟಿಗೆ ಮೂಲವೆನ್ನಬಹುದು. ಆದಿವಾಸಿಗಳಲ್ಲಿ ಟೋಟೆಮ್ ಮತ್ತು ಮ್ಯಾನಗಳ ಕಲ್ಪನೆಗಳಿದ್ದಂತೆ ಇವೂ ಸರ್ವ ಚೇತನವಾದದ (ಆ್ಯನಿಮಿಸಂ) ರೂಪಾಂತರಗಳು. 

ಬೌದ್ಧಮತದ ಮೂಲಪ್ರಕ್ರಿಯೆಗಳಲ್ಲಿ ದೇವರಿಗೆ ಸ್ನಾನವಿರಲಿಲ್ಲ. ಆದರೆ ಮುಂದೆ ಮೈದೆಳದ ಭೌದ್ಧಧರ್ಮದ ಪಂಥಗಳಲ್ಲಿ ಹಿಂದೂ ದೇವತೆಗಳ ಪ್ರಭಾವ ಒದಗಿಬಂತು. ಗುರುವೆಂದು ಮಾತ್ರ ಹೀನಯಾನದಲ್ಲಿ ಪರಿಗಣಿತವಾಗಿದ್ದ ಮಾನುಷೀ ಬುದ್ಧ ಮಹಾಯಾನದಲ್ಲಿ ದೇವರೆಂದು ಗ್ರಹಿಸಲ್ಪಟ್ಟ. ಅವನ ಅನುಕಂಪ, ಕರುಣೆ, ಪ್ರಣಿಧಿಗಳು ಮಾನವರಿಗೆ ನೆರವಾಗುವವೆಂಬ ಕಲ್ಪನೆ ಬೆಳೆದು ಬಂತು. ಅಮಿತಾಭ ಅಥವಾ ಅಮಿತಾಯಸ್ಸು ಎಂಬ ಹೆಸರಿನಿಂದ ಧ್ಯಾನಿಬುದ್ಧನೊಬ್ಬ ದೂರಪ್ರಾಚ್ಯದೇಶಗಳಲ್ಲೆಲ್ಲ ಜನಪ್ರಿಯನಾದ. ನಮೋಃ ಮಿತಭಾಯ ಜಿನಾಯ ತೇ ಮುನೇ ಸುಖಾವತೀಂ ಯಾಮಿ ಚ ತೇನುಕಂಪಯಾ ಎನ್ನುವ ಪ್ರಾರ್ಥನೆ ಈ ದೇಶಗಳಲ್ಲೆಲ್ಲ ಬಳಕೆಯಲ್ಲಿದೆ. ಈ ದೇವರ ಆವಾಸ ಸ್ಥಾನ ಸುಖಾವತಿಯೆಂಬ ಸ್ವರ್ಗ. ಅಮಿತಾಭ ಜಪಾನಿನಲ್ಲಿ ಅಮಿದಾ ಎಂಬ ಹೆಸರಿನಿಂದ ಪ್ರಖ್ಯಾತ. ಕರುಣೆ, ಸೌಶೀಲ್ಯ, ಸಾಮಥ್ರ್ಯಗಳ ಪ್ರತೀಕವಾದ ಅಮಿದಾನ ಆರಾಧನೆ ಈ ದೇಶದಲ್ಲಿ ತುಂಬ ಬಳಕೆಯಲ್ಲಿದೆ. ಬುದ್ಧನ ಧರ್ಮಕಾಯದ ಅಭಿವ್ಯಕ್ತಿಯೇ ಅಮಿತಾಭನೆಂಬುದು ತಾತ್ತ್ವಿಕವಾದ ಸಮಾಧಾನ. ಅಮಿತಾಭನಲ್ಲದೆ ಮಹಾಯಾನದವರು ಮಂಜುಶ್ರೀ, ಅವಲೋಕಿತೇಶ್ವರ. ತಾರಾಬಗವತೀ ಮುಂತಾದ ದೇವತೆಗಳನ್ನೂ ಪೂಜಿಸುತ್ತಾರೆ. ಕರ್ನಾಟಕದಲ್ಲಿ ಭೌದ್ಧಮತ ಪ್ರಚಲಿತವಾಗಿದ್ದಾಗ ಬನವಾಸಿಯ ತಾರಾಭಗವತೀ ದೇವಾಲಯವೂ ಮಂಗಳೂರಿನ ಲೋಕೇಶ್ವರ (ಅವಲೋಕಿತೇಶ್ವರ) ದೇವಾಲಯವೂ ಜನಪ್ರಿಯವಾಗಿದ್ದವು. ಧರ್ಮಸ್ಥಳದ ಮಂಜುನಾಥ ಸ್ವಾಮಿಗೂ ಮಂಜುಶ್ರೀ ಭೋಧಿಸತ್ತ್ವನ ಮೂಲವನ್ನು ಹೇಳುತ್ತಾರೆ. ಭೌದ್ದರಲ್ಲಿ ಮಾನುಷೀ ಬುದ್ಧರು ಧ್ಯಾನಿಬುದ್ಧರು ಭೋಧೀಸತ್ತ್ವರು- ಇವರೆಲ್ಲ ದೇವತೆಗಳೆಂದೇ ಕಲ್ಪನೆ. ಇವುಗಳ ಹಿನ್ನಲೆಯಲ್ಲಿ ಹಿಂದೂ ದೇವತೆಗಳ ಪ್ರಭಾವ ಸ್ಪಷ್ಟವಾಗಿದೆ.

ಹಿಂದೂ ಧರ್ಮದ ಮಡಿಲಿನಿಂದಲೇ ಉದ್ಬೂತವಾದ ಜೈನಧರ್ಮದಲ್ಲೂ ಮೊದಲಿಗೆ ದೇವತೆಗಳ ಸ್ಥಾನ ಅಷ್ಟಾಗಿ ಇರಲಿಲ್ಲ. ಬರುಬರುತ್ತ ತೀರ್ಥಂಕರರನ್ನೇ (ಮುಖ್ಯವಾಗಿ ಮಹಾವೀರ, ಪಾಶ್ರ್ವನಾಥ, ಆದಿನಾಥ, ನೇಮಿನಾಥ) ದೇವತೆಗಳೆಂದು ಬಗೆದು ಅವರನ್ನು ಕಾಮ್ಯಫಲಗಳಿಗೂ ಮೋಕ್ಷಸಾಧಕವಾದ e್ಞÁನಕ್ಕೂ ವಿದ್ಯುಕ್ತವಾಗಿ ಷೋಢಶೋಪಚಾರ ವಿಧಾನದಿಂದ ಪೂಜೆ ಮಾಡುತ್ತಾರೆ. ಪ್ರತಿಯೊಬ್ಬ ತೀರ್ಥಂಕರನಿಗೂ ಯಕ್ಷ- ಯಕ್ಷಿಣಿಯರನ್ನು ಅಳವಡಿಸಿ ಇವರನ್ನು ಪೂಜಿಸುವ ಪದ್ಧತಿ ಬೆಳೆದುಬಂದಿದೆ. ಧರಣೇಂದ್ರಯಕ್ಷ, ಪದ್ಮಾವತೀ ಯಕ್ಷಿಣೀ- ಇವರು ತುಂಬ ಪ್ರಭಾವಶಾಲಿಗಳು. ಋಷಭ ದೇವ ತೀರ್ಥಂಕರನ ಮಗನಾಗಿದ್ದು ತನ್ನ ತಪಶ್ಚರ್ಯೆಯಿಂದ ಜಿನನಾದ ಗೊಮ್ಮಟೇಶ್ವರನೂ ತುಂಬ ಜನಪ್ರಿಯನಾದ ದೇವತೆ. ಇವನಿಗೆ ಪ್ರತೀಕಗಳೂ ದೇವಾಲಯಗಳೂ ಹಲವಾರು ಇವೆ. ಕರ್ನಾಟಕದಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ಹೊಂಬುಚದ ಪದ್ಮಾವತೀ- ಇವರು ಪ್ರಸಿದ್ದರು. ಕಾರ್ಕಳ, ಏಣೂರು, ಸಾಲಿಗ್ರಾಮ, ಮೂಡಬಿದ್ರೆ ಇವೆಲ್ಲ ಜೈನಸ್ಥಳಗಳೇ. ಈ ಜೈನಮೂರ್ತಿಗಳೇ ಅಲ್ಲದೆ ದಕ್ಷಿಣ ಭಾರತದ ಜೈನರು ಹಿಂದೂ ದೇವತೆಗಳನ್ನು ತಮ್ಮ ಧರ್ಮಕ್ಕೆ ಅಳವಡಿಸಿಕೊಂಡಿರುವುದು ಕಾಣುತ್ತದೆ. ಅನಂತಪದ್ಮನಾಭ (ಅನಂತನಾಥ ತೀರ್ಥಂಕರ), ಲಕ್ಷ್ಮಿ, ಸರಸ್ವತಿ, ಬ್ರಹ್ಮ, ಗಣಪತಿ- ಇವರನ್ನೂ ಜೈನರು ಪೂಜಿಸುತ್ತಾರೆ.

ನಾಥ ಪಂಥದವರು ಆ ಪಂಥದ ಪ್ರವರ್ತಕರೆಂದು ಪ್ರಖ್ಯಾತರಾದ ಗೋರಕ್ಷನಾಥ, ಮತ್ಸ್ಯೇಂದ್ರನಾಥ, ಜಯನೀನಾಥ - ಇವರ ಮೂರ್ತಿಗಳನ್ನು ಪೂಜೆ ಮಾಡುತ್ತಾರೆ. ಕಬೀರ ಪಂಥಿಗಳು ಕಬೀರದಾಸನನ್ನೇ ಪೂಜೆ ಮಾಡುತ್ತಾರೆ. ಬಂಗಾಳದ ಕಡೆ ಪ್ರಚಲಿತವಾಗಿರುವ ಚೈತನ್ಯ ಪಂಥದವರು ಕೃಷ್ಣ ಚೈತನ್ಯನ (ಗೌರಾಂಗ) ಪ್ರತಿಮೆಯನ್ನು ರಾಧಾಕೃಷ್ಣರ ಪ್ರತಿಮೆಗಳೊಂದಿಗೆ ಇಟ್ಟು ಆರಾಧಿಸುವ ಸಂಪ್ರದಾಯವಿದೆ. ರಾಮಕೃಷ್ಣ ಮಠದವರು ರಾಮಕೃಷ್ಣ ಪರಮಹಂಸರನ್ನು ದೇವರೆಂದು ಪರಿಗಣಿಸುವುದಿಲ್ಲವಾದರೂ ದೇವರಿಗೆ ನಡೆಯುವ ಸನ್ಮಾನವನ್ನೆಲ್ಲ ಅವರಿಗೂ ಸಲ್ಲಿಸುತ್ತಾರೆ. ರಾಮಕೃಷ್ಣ ಪರಮಹಂಸರ ಪ್ರತಿಕೃತಿಯ ಮುಂದೆ ಭಜನ, ಪಾರಾಯಾಣ ಮಾಡುವುದಲ್ಲದೆ ಮಂತ್ರ ಸಹಿತವಾಗಿ ಪೂಜೆ, ಮಂಗಳಾರತಿಗಳನ್ನು ನಡೆಸುತ್ತಾರೆ. ಯೋಗೋದಾ ಪಂಥದವರು ತಮ್ಮ ಪಂಥದ ಪ್ರವರ್ತಕರಾದ ಯೋಗಾನಂದರನ್ನು ಮಾತ್ರವಲ್ಲದೆ ಅವರ ಗುರುಗಳಾದ ಯುಕ್ತೇಶ್ವರ್ ಮಹಾರಾಜರನ್ನೂ ಅರ್ಚಿಸುತ್ತಾರೆ.

ಪಾರ್ಸಿ ಜನ ಅಗ್ನಿಯನ್ನು ದೇವರೆಂದು ಆರಾಧಿಸುತ್ತಾರೆ. ಇದು ವೈಧಿಕ ಯುಗದಲ್ಲಿಯೇ ಪ್ರಚಲಿತವಾಗಿದ್ದ ಪದ್ಧತಿ; ಇಂಡೊ-ಇರಾನಿಯನ್ ಸಂಸ್ಕøತಿಗೆ ಸಮನಾದದ್ದು. ಹಿಂದುಗಳಲ್ಲು ಸಂಪ್ರದಾಯಸ್ಥರು ಮನೆಯಲ್ಲಿ ತಲೆತಲಾಂತರದಿಂದ ಅವ್ಯಾಹತವಾಗಿ ಬಂದ ಗಾರ್ಹಸ್ಪತ್ಯಾಗ್ನಿಯನ್ನು ಉಳಿಸಿ ಕೊಂಡು ಬರುತ್ತಾರೆ. ಮನೆಯಲ್ಲಿ ನಡೆಯುವ ಎಲ್ಲ ಶುಭ, ಅಶುಭ ಕಾರ್ಯಗಳಲ್ಲೂ ಈ ಅಗ್ನಿಯಿಂದ ಪ್ರಜ್ವಲಿತವಾದ ಹೋಮವನ್ನು ಮಾಡಬೇಕೆಂಬ ನಿಯಮವಿದೆ. ಪಾರ್ಸಿಗಳಲ್ಲೂ ಹೋಮ ವಿಧಿ ಬಳಕೆಯಲ್ಲಿದೆ ; ಅಗ್ನಿಯನ್ನು ಬಿಟ್ಟು ಬೇರೊಂದು ದೇವರನ್ನು ಅವರು ಪೂಜಿಸುವುದಿಲ್ಲ.

ಮುಸ್ಲಿಂ ಜನ ಅಲ್ಲಾ (ಅಥವಾ ಅರ್‍ರ್ರಬ್) ಎಂಬ ಹೆಸರಿನಿಂದ ಒಬ್ಬನೇ ದೇವರನ್ನು ಆರಾಧಿಸುತ್ತಾರೆ. ಇವರು ನಿಷ್ಠುರವಾಗಿ ಏಕೇಶ್ವರವಾದಿಗಳು. ಅಲ್ಲಾ ಎಂದರೆ ಪರಿಪೂರ್ಣನಾದ ಸ್ವಯಂಭು, ಅರ್‍ರ್ರಬ್ ಎಂದರೆ ಸ್ವಾಮಿ. ಒಡೆಯ, ಅರ್‍ಗ್ರಹಮಾನ್ ಎಂದರೆ ದಯಾಳು. ಅಶ್‍ಷಾಫೀ ಎಂದರೆ ಭವವೈದ್ಯ, ಖುದಾ ಎಂದರೆ ಸರ್ವಸ್ವತಂತ್ರ. ಅಲಹೈ ಎಂದರೆ ಚೈತನ್ಯ. ಅಲ್ ಖಾಲಿಖ್ ಎಂದರೆ ಸೃಷ್ಟಿಕರ್ತ. ಅಲ್ ಜಲೀಲ್ ಎಂದರೆ ವಿಭವಸಂಪನ್ನ. ಅಲ್ ರಸಾಕ್ ಎಂದರೆ ರಕ್ಷಕ. ಅರ್ ರಷೀದ್ ಎಂದರೆ ನಿಯಾಮಕ. ಅಲ್ ಗಫಾರ್ ಎಂದರೆ ಕ್ಷಮಶಾಲಿ ಇವೆಲ್ಲ ಒಬ್ಬನೆ ದೇವರ ನಾಮಾಂತರಗಳು (ಅಸ್ಮಾ ಅಲ್‍ಹುಸ್ನಾ). ಅಲ್ಲಾ ಎಂಬ ಒಬ್ಬನಲ್ಲದೆ ಮತ್ತೊಬ್ಬನಿಲ್ಲ ಎಂಬುದು ಇಸ್ಲಾಂ ಧರ್ಮದ ಮೂಲಸೂತ್ರ. ಈ ದೇವರಿಗೆ ಏಳು ಲಕ್ಷಣಗಳನ್ನು ಹೇಳುತ್ತಾರೆ : ಚೈತನ್ಯ (ಹಯಾಹ್), e್ಞÁನ (ಇಲ್ಮ್), ಶಕ್ತಿ (ಖುದ್ರ), ಸಂಕಲ್ಪ (ಇರಾದ), ಶ್ರವಣ (ಸಮ್), ದರ್ಶನ(ಬಸóರ್) ಮತ್ತು ವಾಕ್ (ಕಲಾಮ್). ಕಿವಿಯಿಲ್ಲದೆ ಶಬ್ದವನ್ನು ಕೇಳುವುದು, ಕಣ್ಣಿಲ್ಲದೆ ಎಲ್ಲ ರೂಪಗಳನ್ನೂ ನೋಡುವುದು, ಬಾಯಿಲ್ಲದೆ ಎಲ್ಲ ಮಾತುಗಳನ್ನು ಆಡುವುದು ಭಗವಂತನೊಬ್ಬನಿಗೆ ಸಾಧ್ಯ. ತನ್ನ ಸಂಕಲ್ಪವನ್ನು ಚಾಚೂ ತಪ್ಪದೆ ನಡೆಸಿಕೊಳ್ಳುವನನು ಅವನೇ. ಅವನ ಶಕ್ತಿಗೆ ಮಿತಿಯಿಲ್ಲ. ಸತ್ತವರನ್ನೂ ಎಬ್ಬಿಸಬಲ್ಲ. ಮರಗಳನ್ನು ಓಡಾಡಿಸಬಲ್ಲ. ಬಂಡೆಯನ್ನು ಮಾತಾಡಿಸಬಲ್ಲ, ಸ್ವರ್ಗ ಮತ್ರ್ಯಗಳನ್ನು ಧ್ವಂಸ ಮಾಡಬಲ್ಲ, ಭೂಥಭವಿಷ್ಯದ್ವರ್ತಮಾನಗಳನ್ನು ಗುಹ್ಯ ಸ್ಪಷ್ಟಗಳೆಲ್ಲವನ್ನು ಅರಿಯಬಲ್ಲ, ಅವನದು ಅನಾದಿ, ಅನಂತಚೈತನ್ಯ. ಅವನು ಒಂದೆಡೆ ಇದ್ದಾನೆ ಎನ್ನಲಾಗದು, ಅವನು ಸರ್ವವ್ಯಾಪ್ತಿ, ಸರ್ವಾಂತರ್ಯಾಮಿ. ಅವನಿಗೆ ಸಮರಾದವರೂ ಅವನಿಗೆ ಮಿಗಿಲಾದವರೂ ಯಾರೂ ಇರರು. ಭಗವಂತನ ಸ್ವರೂಪವನ್ನು ಅರಿಯುವುದು ಮನುಷ್ಯಮಾತ್ರದವರಿಂದ ಸಾಧ್ಯವಿಲ್ಲ ; ಅದಕ್ಕೆ ಪ್ರಯತ್ನ ಪಡುವುದೂ ಸಲ್ಲದು ; ನಾವು ಆತನ ದಿವ್ಯವಾದ ಕೊಡುಗೆಗಳನ್ನು ಮನನ ಮಾಡಬೇಕಷ್ಟೆ - ಎಂದು ಮಹಮದ್ ಪ್ರವಾದಿ ಹೇಳುತ್ತಾನೆ. ಭಗವಂತನ ಸ್ವರೂಪದ ವಿಚಾರವಾಗಿ ಮುಸ್ಲಿಂ ದಾರ್ಶನಿಕರಲ್ಲಿ ದೃಷ್ಟಿಭೇಧವಿದೆ ; ಇದರಿಂದಾಗಿ ಹಲವಾರು ಶಾಖೆಗಳು ಉತ್ಪನ್ನವಾಗಿವೆ. ದೇವರಿಗೆ ಮಹಮ್ಮದ್ ಪ್ರಕಾರ ತೊಂಬತ್ತೊಂಬತ್ತು ದಿವ್ಯನಾಮಗಳಿವೆ ; ಇವಕ್ಕೆ ಅಲ್ಲಾ ಎಂಬುದನ್ನು ಮೊದಲಲ್ಲೋ ಅಥವಾ ಕಡೆಯಲ್ಲೋ ಸೇರಿಸಿ ನೂರು ದಿವ್ಯನಾಮಗಳನ್ನು ಹೇಳುತ್ತಾರೆ. ಭಗವಂತನ ಪ್ರಮುಖವಾದ ಲಕ್ಷಣ ಸರ್ವಶಕ್ತನೆಂಬುವುದು ಮಹಮದ್ ಪ್ರವಾದಿಯ ಬೋಧನೆಯ ಫಲವಾಗಿ ಮೈದೆಳೆದಿದ್ದು ಅದೇ ನೆಲೆಯಾಗಿ ನಿಂತಿತು. ಉಳಿದ ತೊಂಬತ್ತೆಂಟು ದಿವ್ಯನಾಮಗಳು ಬರುಬರುತ್ತ ಹಿಂದೆ ಸಾಗಿದವು. ಮುಸ್ಲಿಂ ಜನರ ದೇವರು ಅತ್ಯಂತ ಸಮರ್ಥ. ಅವರು ದೇವರನ್ನು ಪಿತಾಸಿ ಲೋಕಸ್ಯ ಚರಾಚರಸ್ಯ ಎಂದು ಹಿಂದೂಗಳಂತೆ ಅಥವಾ ಕ್ರೈಸ್ತರಂತೆ, ಜನಕನೆಂದು ಬಗೆಯುವುದಿಲ್ಲ : ಮನುಷ್ಯನಿಗೂ ದೇವರಿಗೂ ಇರುವ ಸಂಬಂಧ ಸ್ವಾಮಿ ಸೇವಕರ ಸಂಬಂಧ. ಮುಕ್ತಿಯೆಂದರೆ ಭಗವಂತನಿಂದ ಒದಗಬಹುದಾದ ಶಿಕ್ಷೆಯಿಂದ ಸಂರಕ್ಷಣೆ. ಇದು ಭಗವಂತನ ಆದೇಶವನ್ನು ನಡೆಸಿ ವಿಹಿತಕರ್ಮಗಳನ್ನು ಅನುಷ್ಠಾನ ಮಾಡುವುದರಿಂದ ಬರುತ್ತದೆ.

ಇಸ್ಲಾಂ ಧರ್ಮ ರೂಪುಗೊಳ್ಳುವ ಮುನ್ನ ಅರಬ್ಬೀ ಜನರಲ್ಲಿ ಇಲಾಹ್ (ಸ್ವಾಮಿ) ಎಂಬ ಹೆಸರಿಂದ ದೇವರನ್ನು ಆರಾಧನೆ ಮಾಡುವ ಪದ್ಧತಿ ಇತ್ತು. ಮುಸ್ಲಿಂ ಜನ ಈ ಪದವನ್ನು ಅಲ್‍ರಬ್ ಎಂಬುದಕ್ಕೆ ಸಮಾನವೆಂದು ಗ್ರಹಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಪ್ರತೀಕ ಪೂಜೆ (ವಿಗ್ರಹಾರಾಧನೆ) ನಿಷಿದ್ದ; ಅದು ಪಾಪವೆಂದೂ ಪರಿಗಣಿತ. ಆದರೆ ಅರಬ್ಬೀ ಜನರಲ್ಲಿ ಮೊದಲಲ್ಲಿ ದೇವರಿಗೆ ಮೂರ್ತಿಗಳನ್ನು ಮಾಡಿ ಮಂದಿರಗಳನ್ನು ಕಟ್ಟುವ ಪದ್ಧತಿ ಇದ್ದಂತೆ ತಿಳಿದುಬರುತ್ತದೆ. ಅವರಲ್ಲಿ ಅಲ್ ಉಸ್ಸಾ, ಅಲ್‍ಲಾತ್, ಮನಾತ್, ವದ್ದ್, ಸುವó, ಯೂಘೂಫ್, ಯುಘೂಥ್, ನಸ್ರ್ ಮುಂತಾದ ಹಲವು ದೇವತೆಗಳಿದ್ದುದು ಸ್ಪಷ್ಟವಾಗುತ್ತದೆ. ಕೆಲವಾರು ಪ್ರಾಣಿಗಳನ್ನೂ ದೇವತೆಗಳಂತೆ ಬಗೆದಿದ್ದುದು ಧ್ವನಿತವಾಗುತ್ತದೆ.

ಇಸ್ಲಾಂ, ಕ್ರೈಸ್ತ, ಅರಬ್ಬೀ ಧರ್ಮಗಳ ಹಿನ್ನಲೆಯಲ್ಲಿ ಯಹೂದೀ ಧರ್ಮದ ಭವತ್ಕಲ್ಪನೆ ರೂಢವಾಗಿದೆ. ಯಹೂದೀಯರೂ ಏಕೇಶ್ವರವಾದಿಗಳು, ಅವರ ದೇವರು ಯೆಹ್ವೆ ಮನುಷ್ಯಾಕೃತಿಯುಳ್ಳವ, ಮನುಷ್ಯ ಸ್ವಭಾವದವ ಯೆಹ್ವೆ ಎಂಬುದು ದಯಾಗುಣವನ್ನು ಸೂಚಿಸುವ ಶಬ್ದ ; ಎಲೋಹಿಂ, ಎಂಬ ಇನ್ನೊಂದು ಅವನ ಹೆಸರು ಗತಿನಿರ್ಣಯವನ್ನು (ಜಜ್‍ಮೆಂಟ್) ಸೂಚಿಸುತ್ತದೆ. ವಿಶ್ವದ ಉತ್ತುಂಗ ಶಿಖರವಾದ ಸ್ವರ್ಗದಲ್ಲಿ ಈ ದೇವರ ವಾಸ. ಇಡೀ ಜಗತ್ತಿಗೆ ಅವನು ರಾಜ ; ಅವನ ಸಂಕಲ್ಪವನ್ನು ನಡೆಸುತ್ತ ಅಸಂಖ್ಯಾತರಾದ ದೇವದೂತರು ಎಂದೂ ಅವನ ಸುತ್ತ ನೆರೆದಿರುತ್ತಾರೆ. ಸಾಮಾನ್ಯ ಮನುಷ್ಯರು ಅವನನ್ನು ನೋಡುವುದು ಅಸಾಧ್ಯ ; ಅವರಿಂದ ತೀರ ವಿವಿಕ್ತನಾಗಿ ಇರುವ ದೇವರನ್ನು ಕೆಲವೇ ಭಾಗ್ಯಶಾಲಿಗಳು ಪುಣ್ಯವಿಶೇಷದಿಂದ ಅಲ್ಪಸ್ವಲ್ಪ ಕಾಣಬಹುದು. ಮನುಷ್ಯ ರಾಜರಿಗಿರುವಂತೆ ಈ ಮಹಾರಾಜನಿಗೂ ಭೂಮಿಯ ರಾಜಕುಮಾರ (ಮೆಟೆಟ್ರಾನ್), ಸಮುದ್ರದ ರಾಜಕುಮಾರ (ರೆಹಬ್) ಗಾಳಿಯ ರಾಜಕುಮಾರ (ಯುರ್ಕಮಿ) ಮುಂತಾದ ರಾಜಪುತ್ರರೂ ಅಧಿಕಾರಿಗಳೂ ಇರುತ್ತಾರೆ. ಇವರೆಲ್ಲ ಸೇರಿ ವಿಶ್ವವಿಯಮನ ವ್ಯಾಪಾರವನ್ನು ನೋಡಿಕೊಳ್ಳುತ್ತಾರೆ. ಯೆಹ್ವೆ ದೇವರನ್ನು ಜನಕನೆಂದೂ ಯಹೂದೀಯರು ವ್ಯವಹರಿಸುತ್ತಾರೆ. ಈ ದೇವರು ಸೃಷ್ಟಿಕರ್ತನೂ ಹೌದು. ಯಹೂದೀಯರ ಗ್ರಂಥಗಳಲ್ಲಿ ದೇವರ ನಾಮೋಚ್ಚಾರಣೆಯನ್ನು ನೇರವಾಗಿ ಮಾಡಬಾರದೆಂಬ ನಿಯಮವಿದೆ. ಸ್ವಾಮಿ ಎನ್ನುವ ಬದಲು ಸ್ವರ್ಗ ಎನ್ನುತ್ತಾರೆಂಬುದು ಇದಕ್ಕೆ ಒಂದು ನಿದರ್ಶನ. ದೇವರ ಗುಣಗಳು ಬೇರೆ ಯಾರಿಗೂ ಇಲ್ಲದಿರುವುದರಿಂದ ಅವನೇ ಸರ್ವೋತ್ತಮ. ಅಸಮ. ಅವನ ನಿಯಮಗಳನ್ನು ಎಂಥ ಕಷ್ಟ ಬಂದರೂ ಎದೆಗುಂದದೆ ಪರಿಪಾಲಿಸುವುದು ಯಹೂದೀಯರ ಪಾಲಿಗೆ ವ್ರತ. ಭಗವಂತನನ್ನು ತೃಪ್ತಿ ಪಡಿಸುವ ವಿಧಾನ ಅದೇ ಎಂದು ಅವರ ಶ್ರದ್ಧೆ. ಈ ದಿವ್ಯಾಜ್ಞೆಯ ಪರಿಪಾಲನೆಯೂ ಭಗವಂತನ e್ಞÁನವೂ ಎರಡೂ ಒಂದೇ. ದೇವರ ರಾಜ್ಯ ಜಗತ್ತಿನಲ್ಲಿ ಮೂಡಿಬರುವ ದಿನವನ್ನು ಎದುರು ನೋಡುತ್ತ ಯಹೂದೀಯರು ತಮ್ಮ ಜನಾಂಗವನ್ನು ರೂಢಿಸಿಕೊಂಡು ಬಂದಿದ್ದಾರೆ. ಮೋಸಸ್ ಎಂಬ ಪ್ರವಾದಿ ಈ ಜನಾಂಗದ ಉದ್ಧಾರಕನಾಗಿ ನಿಂತಿದ್ದು ದೇವರ ಆದೇಶದ ಮೇಲೆಯೇ ; ಅವನಿಗೆ ದೇವರ ಬೆನ್ನಮೇಲೆ ಇಳಿಬಿದ್ದಿದ್ದ ವಸ್ತ್ರದ ಗಂಟನ್ನು ನೋಡುವ ಸೌಭಾಗ್ಯ ಒದಗಿದ ಮೇಲೆಯೇ, ಅವನಿಗೂ ದೇವರ ಸಾಕ್ಷಾತ್ಕಾರ ಸಂಪೂರ್ಣವಾಗಿ, ಪ್ರತ್ಯಕ್ಷವಾಗಿ ಆಗಲಿಲ್ಲವೆಂಬುದು ಗಮನಾರ್ಹ. ಎಂದರೆ, ದೇವರು ಅಚಿಂತ್ಯ, ದುರ್ದರ್ಶ, ಗೂಢ, ಆದರೆ ಭೀಷಾಸ್ಮಾದ್ವಾತಃ ಪವತೇ ಎಂದು ಮೊದಲಾದ ವೈಧಿಕ ದೃಷ್ಟಿ ಯಹೂದೀಯರಿಗೂ ಅನ್ವಯಿಸುತ್ತದೆ ಎನ್ನಬಹುದು. ಇವರ ಭಗವದ್ದøಷ್ಟಿ ಮುಂದೆ ಜಗತ್ತಿನಲ್ಲೆಲ್ಲ ವಿಸ್ತ್ರತವಾದ ಕ್ರೈಸ್ತ ಜನಾಂಗದ ದರ್ಶನವನ್ನು ಹಸನಾಗಿ ಮಾಡಿತು. 

ಇಸ್ರೇಲ್‍ನಲ್ಲಿ ನೂರಾರು ತಲೆಮಾರುಗಳಿಂದ ಶ್ರದ್ಧೆಯ, ಭಕ್ತಿಯ ಆರಾಧನೆಯನ್ನು ಪಡೆದು ವ್ಯಕ್ತವಾಗಿದ್ದ ದೇವರು ಯೇಸುಕ್ರಿಸ್ತನ ಪಾಲಿನ ದೇವರು. ಕ್ರೈಸ್ತರ ಮೂಲಗ್ರಂಥವಾದ ಹಳೆಯ ಒಡಂಬಡಿಕೆಯಲ್ಲಿಯೂ ಈ ದೇವರ ಪ್ರಸ್ತಾಪವಿದೆ. ನೋಅ. ಏಬ್ರಹಾಮ್, ಮೋಸಸ್ ಇವರ ದೇವರು ಕ್ರಿಸ್ತನ ಕಾಲಕ್ಕೂ ಮುಂಚೆ ರೂಪತಳೆದಿದ್ದವ. ಈ ಏಕೈಕ, ಅನಂತರ ಭಗವಂತ ವೈಯಕ್ತಿಕವಾಗಿ ಒಬ್ಬೊಬ್ಬರಿಗೂ ಈಶ್ವರ ಆಗಬಲ್ಲ. ಅವನ ಸ್ವರೂಪ ಆಧ್ಯಾತ್ಮಿಕವಾದುದು. ಅವನು ಪರತತ್ತ್ವ, ಅವನನ್ನು ಮುಟ್ಟಲು ನೈತಿಕ ಪರಿಪೂರ್ಣತೆ ಅತ್ಯಗತ್ಯ ಎಂಬುದು ಇಸ್ರೇಲ್ ಭಕ್ತರ ನಿಲುವು. ಧರ್ಮದ ಪಾವಿತ್ರ್ಯದ ಮೂರ್ತಿಯಾದ ಈ ದೇವರು ಸೃಷ್ಟಿಕರ್ತ, ಜಗನ್ನಿಯಾಮಕ ಯೇಸುಕ್ರಿಸ್ತನೂ ಇಸ್ರೇಲಿನವನೇ ಆಗಿದ್ದು ಈ ದೇವರನ್ನೇ ಒಪ್ಪಿಕೊಂಡ. ಅವನ ಆದೇಶಗಳಲೆಲ್ಲ ದೇವರು ಒಬ್ಬನು ಎಂಬ ಕಲ್ಪನೆಯೇ ಸಾರೋದ್ಧಾರವಾಗಿ ಬಂದಿದೆ. ಅವನ ಸಂಕಲ್ಪದ ಚಿಹ್ನೆಗಳೆಂದರೆ ಪಾವಿತ್ರ್ಯ, ಧರ್ಮ. ಅವನ ಇಚ್ಚೆಯಿಲ್ಲದೆ ಒಂದು ಗುಬ್ಬಚ್ಚಿಯೂ ಕೆಳಗೆ ಉರುಳಲಾರದು. ದೇವರ ಸಾತ್ತ್ವಿಕ ಭಾವವನ್ನು ಯೇಸುಕ್ರಿಸ್ತ ವಿಸ್ತರಿಸಿದ. ಭೂಮಿ ಮೇರೆಯನ್ನೂ ಮೀರಿ ಅವನ ಸತ್ಸ್ವಭಾವ ನಿಂತಿದೆ. ಅವನು ದಯಾಮಯ ; ಕ್ಷಮಶೀಲ. ಯೇಸುಕ್ರಿಸ್ತ ಹೇಳಿದ ದೇವರ ಮುಖ್ಯ ಲಕ್ಷಣವೆಂದರೆ ಅವನು ದಿವ್ಯ ಜನಕ. ಯೇಸುಕ್ರಿಸ್ತ ಅವನ ಮಗನೆಂಬ ಕಲ್ಪನೆಯಿಂದ ಯೇಸುಕ್ರಿಸ್ತ ಅವನನ್ನು ತಿಳಿದಂತೆ ಬೇರೆ ಯಾರೂ ತಿಳಿದಿಲ್ಲ. ಆದಕಾರಣ ದೇವರನ್ನು ಮುಟ್ಟಬೇಕಾದರೆ ಕ್ರಿಸ್ತನ ಸಂಧಾನ ಅಗತ್ಯ. ದೇವರು ಒಬ್ಬನೇ ಆದರೂ ಯೇಸುಕ್ರಿಸ್ತನನ್ನು ದೇವತೆಯೆಂದು ಬಗೆದಿದ್ದಾರೆ. ಇವರಿಬ್ಬರ ಜೊತೆಯಲ್ಲಿ ಚೈತನ್ಯವೆಂಬ ದೇವತೆಯೂ ಸೇರಿದಂತೆ ತ್ರಿಮೂರ್ತಿಯ ಕಲ್ಪನೆ ಕ್ರೈಸ್ತರಲ್ಲಿದೆ.

ದೇವರು ಜ್ಯೋತಿಸ್ವರೂಪ, ಪ್ರೇಮಮಯ. ಜಸ್ಟಿನ್ ಮಾರ್ಟಿನ್ ಎಂಬ ಕ್ರೈಸ್ತದಾರ್ಶನಿಕನ ಪ್ರಕಾರ ಭಗವಂತ ಎಲ್ಲ ಮನುಷ್ಯರಲ್ಲೂ ಅಂತರ್ಯಾಮಿಯಾಗಿ ಪ್ರಕಾಶಮಾನವಾಗಿದ್ದಾನೆ. ಪರತತ್ತ್ವವಾದ ಭಗವಂತ ಜನರಲ್ಲಿ ದಯಮಾಡಿ ಅವರ ಹೃದಯಗಳಲ್ಲಿ ಬೆಳಗುತ್ತಾನೆ. ಈ ತತ್ತ್ವದ ಅಭಿವ್ಯಕ್ತಿಯಲ್ಲಿ ಮೂರು ಪ್ರಕಾರಗಳನ್ನು ಹೇಳಿ ತ್ರಿಮೂರ್ತಿ ತತ್ತ್ವವನ್ನು ಸಮರ್ಥಿಸುತ್ತಾರೆ. ದೇವರು ಆದಿಕಾರಣ ; ಕ್ರಿಸ್ತ (ಮಗ) ಅನುಸಂಧಾನ ಸ್ವರೂಪ ; ಚೈತನ್ಯ ಅಭಿವ್ಯಕ್ತಿಯ ಶಕ್ತಿ. ಪ್ರತಿಯೊಂದು ದೈವಿಕ ವ್ಯಾಪಾರವೂ ಭಗವಂತ ತನ್ನ ಮಗನ ಮೂಲಕ ಚೈತನ್ಯದಿಂದ ಮಾಡುವ ಪ್ರಸಂಗ ಎಂದು ತತ್ತ್ವ ಹೇಳುತ್ತದೆ. ಆಗಸ್ಟಿನ್ ಎಂಬ ತತ್ತ್ವಜ್ಞ ಈ ಮೂರು ಸೇರಿ ಒಬ್ಬನೇ ದೇವರು ಎಂಬ ಸಿದ್ಧಾಂತವನ್ನು ನಿರೂಪಿಸಿದ. ತ್ರಿಮೂರ್ತಿಗಳಲ್ಲಿ ಪ್ರತಿ ವ್ಯಕ್ತಿಯೂ ಸಾಪೇಕ್ಷಕ, ದೇವರ ಒಂದು ಮುಖ. ದೇವರು ಒಬ್ಬನೇ ಎಂಬುದು ಪಾರಾಮಾರ್ಥಿಕ ಸತ್ಯ. ಮೂರು ದೈವಗಳು ವ್ಯಾವಹಾರಿಕ ನೆಲೆ. ಕ್ರೈಸ್ತರು ತಂದೆಯನ್ನು ಮಾತ್ರವಲ್ಲದೆ ಕ್ರಿಸ್ತನನ್ನೂ ಆತನ ತಾಯಿ ಮೇರಿಯನ್ನೂ ಹಲವಾರು ಸಂತರನ್ನೂ ಆರಾಧಿಸುತ್ತಾರೆ. ಇವರಲ್ಲಿ ಮೂರ್ತಿಪೂಜೆಯನ್ನು ಅನುಮೋದಿಸುವವರ ಪಂಥವೂ ಉಂಟು. ಭಾರತದಲ್ಲಿ ನೆಲೆಯೂರಿದ ಕ್ರೈಸ್ತಪಂಥದವರು ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಾರೆ; ಪೂಜೆಯಲ್ಲಿ ಹಲವಾರು ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಾರೆ.
ಚೀನೀಯರು ದೇವರನ್ನು ಮೇಲಿನ ರಾಜ(ಷಾಂಗ್-ಟಿ) ಎಂದೂ ಸ್ವರ್ಗ (ತಿ-ಇವಿನ್) ಎಂದೂ ವ್ಯವಹರಿಸುತ್ತಾರೆ. ದೇವರನ್ನು ನೇರವಾಗಿ ಅವನ ಹೆಸರನ್ನು ಹಿಡಿದು ಅಥವಾ ಅಧಿಕಾರವನ್ನು ಸೂಚಿಸಿ ಹೇಳುವುದು ಅನುಚಿತವೆಂದೂ ಅದಕ್ಕಾಗಿ ಅವನ ನಿವಾಸಸ್ಥಾನದ ನಿರ್ದೇಶನ ಮಾಡುವುದು ಒಳ್ಳೆಯದೆಂದೂ ಅವರ ಅಭಿಮತ. ಇದಕ್ಕೇ ಎಲ್ಲ ಆರಾಧನೆಗಳೂ ಸಲ್ಲಬೇಕೆಂಬ ನಿಯಮ ಇದ್ದರೂ ವ್ಯವಹಾರದಲ್ಲಿ ನೂರಾರು ದೇವತೆಗಳನ್ನು ಸೃಷ್ಟಿ ಮಾಡಿದ್ದಾರೆ. ಸ್ವರ್ಗದ, ಭೂಮಿಯ ಪೈರಿನ ನೀರಿನ, ಪಿತೃದೇವಾಲಯಗಳ ದೇವತೆಗಳಿಗೆ ನಿತ್ಯವೂ ಪೂಜೆ ಸಲ್ಲುತ್ತದೆ. ಷಾಂಗ್-ಟಿಯ ಪೂಜೆ ಪ್ರಾಚೀನವಾದುದೆಂದೂ ಬಹುದೇವತಾವಾದ ಕ್ರಿಸ್ತಪೂರ್ವ 221ರ ಸುಮಾರಿಗೆ ಚಕ್ರವರ್ತಿ ವೇನ್-ಟಿ ಎಂಬುವನಿಂದ ಪ್ರವರ್ತಿತವಾಯಿತೆಂದೂ ಹೇಳುತ್ತಾರೆ. ಈ ಅರಸ ಸ್ವರ್ಗದೇವತೆ ಭೂದೇವತೆ, ಯುದ್ಧದೇವತೆ, ಚಂದ್ರದೇವತೆ, ಸೂರ್ಯದೇವತೆ, ಋತು - ಚತುಷ್ಟಯದೇವತೆ, ಯಾಂಗ್ ದೇವತೆ, ಯಿನ್ ದೇವತೆ - ಹೀಗೆ ಎಂಟು ದೇವತೆಗಳಿಗೆ ಮಂದಿರಗಳನ್ನು ಕಟ್ಟಿಸಿ ಅವುಗಳ ಆರಾಧನೆಯ ವ್ಯವಸ್ಥೆ ಮಾಡಿದ. ಆದರೆ ಇವನ ಪ್ರಭಾವ ಅಷ್ಟಾಗಿ ಉಳಿಯಲಿಲ್ಲ. ಸ್ವರ್ಗ ಎಂಬ ಅಭಿಧಾನದಿಂದ ಜನಪ್ರಿಯನಾದ ಷಾಂಗ್-ಟಿ ದೇವತೆಯ ಪೂಜೆಯೇ ದೇಶದಲ್ಲೆಲ್ಲ ಪ್ರಚಲಿತವಾಗಿತ್ತು. ಚೌ ಮನೆತನದ ಪ್ರವರ್ತಕರಾಜಕುಮಾರ ವೆನ್ ಎಂಬಾತ ಹಾರುವ ಹಕ್ಕಿಗಿರುವಂಥ ಚಾಕಚತ್ಯೆಯಿಂದ ಷಾಂಗ್- ಟಿಯನ್ನು- ಪೂಜಿಸಿದನೆಂದೂ ಇದರಿಂದಾಗಿ ಶಾಶ್ವತವಾದ ಸುಖವನ್ನು ಪಡೆದನೆಂದೂ ನಂಬುತ್ತಾರೆ. ಇವನಿಂದಲೇ ಷಾಂಗ್-ಟೀ ಪಂಥ ಬಳಕೆಗೆ ಬಂದುದು. ಮಗನಿಗೆ ತಂದೆತಾಯಿಗಳಿದ್ದಂತೆ ಎಲ್ಲರಿಗೂ ಷಾಂಗ್-ಟಿ; ಅವನ ಕಾರುಣ್ಯ, ಪ್ರೀತಿಗಳು ಅಸದೃಶವಾದವು ; ಜನಗಳಿಗೆ ರಾಜನಾದವ ಸ್ವರ್ಗಕ್ಕೆ ಷಾಂಗ್-ಟಿಯ ನಿಯಮಗಳಿಗೆ, ಅಧೀನರಾಗಿರಬೇಕು. ರಾಜ ಷಾಂಗ್-ಟಿಯನ್ನು ತಂದೆಯಂತೆ ಪೂಜಿಸಬೇಕು - ಎಂಬ ನಿಯಮಗಳಿವೆ. ಚೀನೀಯರ ಪಾಲಿಗೆ ಷಾಂಗ್-ಟಿ ಎಂಬುದು ಆಧಾತ್ಯ ತತ್ತ್ವ, ಚೈತನ್ಯ ಸ್ವರೂಪಿ, ಸರ್ವಶಕ್ತ, ಸರ್ವವ್ಯಾಪಿ; ಜಗತ್ತಿನ ಎಲ್ಲ ಪ್ರಸಂಗಗಳೂ ಅವನ ಅರಿವಿಗೆ ಬರುತ್ತವೆ. ಮನುಷ್ಯರಲ್ಲಿ ಇದು ಅಂತರ್ಯಾಮಿಯಾಗಿರುತ್ತದೆ. ಲಾವೊ-ಟ್ಸು ಹೇಳುತ್ತಾನೆ : `ಸ್ವರ್ಗದ ಬಲೆ ಎಲ್ಲೆಲ್ಲಿಯೂ ಹರಡಿರುತ್ತದೆ ; ಅದರ ಹರವು ವಿಶಾಲವಾದದು ; ಅದು ಹಿಡಿಯದಿದ್ದುದೇ ಇಲ್ಲ. ಕನ್‍ಫ್ಯೂಸನ ಪ್ರಕಾರ ಮನುಷ್ಯರಲ್ಲಿರುವ ಒಳ್ಳೆಯತನಕ್ಕೆಲ್ಲ ಸ್ವರ್ಗವೇ ಆಧಾರ ; ಎಲ್ಲ ಕೆಲಸಗಳೂ ಆದರೆ ಕೆಲಸಗಳೆ ; ಮನುಷ್ಯರರು ನಿಮಿತ್ತಮಾತ್ರ. ದೇವರ ಸಂಕಲ್ಪಕ್ಕೆ ತಡೆಯೆಂಬುದೇ ಇಲ್ಲ. ಅದನ್ನು ಮೀರಿದುದೇ ಇಲ್ಲ; ಆದರೂ ಮಹತೋಮಹೀಯವಾದ ಇದು ಅಣೋರಣೀಯನಾದ ಭಕ್ತನ ಆರ್ತಸ್ವರವನ್ನೂ ಆಲೈಸಬಲ್ಲದು. ಮನುಷ್ಯನ ಮೂಲವೇ ಆದುದರಿಂದ ಮನುಷ್ಯನಿಗೆ ದುಃಖ ಒದಗಿದಾಗ ಇದಕ್ಕೆ ಹಿಂದಿರುಗಬೇಕೆಂಬ ಆಶಯ ಚೀನೀದರ್ಶನರಲ್ಲಿ ಕಂಡುಬರುತ್ತದೆ. ಚೀನೀ ದೇವಾಲಯಗಳಲ್ಲಿ ಪಿತೃಪೂಜೆ ಪ್ರಸಕ್ತವಾಗಿದೆ. ಭೌದ್ಧಧರ್ಮದ ಪ್ರಭಾವದಿಂಧ ಪ್ರe್ಞÁಪಾರಮಿತ, ಮಂಜುಶ್ರೀ, ಅವಲೋಕಿತ, ಅಮಿತಾಯು ಮುಂತಾದ ದೇವತೆಗಳು ಚೀನದಲ್ಲಿ ಜನಪ್ರಿಯರಾಗಿದ್ದಾರೆ

ಜಪಾನ್‍ಜನ ದೇವರನ್ನು `ಕಾಮೀ ಎಂದು ಕರೆಯುತ್ತಾರೆ. ಈ ಪದದ ವ್ಯುತ್ಪತ್ತಿ ಸಂದಿಗ್ಧವಾಗಿದೆ. ಐನೂ ಎಂಬ ಜಪಾನೀ ಆದಿವಾಸಿಜನ ಬಳಸುವ ಕಾಮ್ಯು (ಎಂದರೆ ವ್ಯಾಪಕವಾದದು, ನಮ್ಮ `ವಿಷ್ಣು ಪದದಂತೆ) ಎಂಬ ಪದದಿಂದ ಬಂದುದೆಂದು ಹೇಳುತ್ತಾರೆ. ಜಪಾನೀಯರು ವ್ಯವಹಾರದಲ್ಲಿ ಕಾಮಿ ಎಂಬ ಪದವನ್ನು ದೊಡ್ಡ ಅಂತಸ್ತಿನ ಜನ ಎಂಬ ಅರ್ಥದಲ್ಲಿ ಶಿಮೊ (ಸಣ್ಣ ಅಂತಸ್ತಿನ ಜನ) ಪದಕ್ಕೆ ವಿರುದ್ಧವಾಗಿ ಉಪಯೋಗಿಸುತ್ತಾರೆ. ಸ್ವರ್ಗ ಕಾಮಿ, ಭೂಮಿ, ಶಿಮೊ. ಹಳೆಯ ಜಪಾನೀ ಧಾರ್ಮಿಕ ಸಾಹಿತ್ಯದಲ್ಲಿ ನಾಕದ, ಲೋಕದ ಎಲ್ಲ ದೇವತೆಗಳನ್ನೂ ಸೇರಿಸಿ ಒಟ್ಟಾರೆ ಕಾಮಿ (ವಿಶ್ವದೇವಾ ಎನ್ನುವ ಅರ್ಥದಲ್ಲಿ) ಎಂದು ವ್ಯವಹರಿಸಿದ್ದಾರೆ. ಒಂದೊಂದು ಪ್ರಾಕೃತಿಕ ಪ್ರಸಂಗಕ್ಕೂ ಒಂದೊಂದು ಅಧಿದೇವತೆಯನ್ನು ಹೇಳಿ ಒಟ್ಟು ಎಂಟು ಕೋಟಿ ದೇವತೆಗಳ ಪಟ್ಟಿಯನ್ನು ಆ ಜನ ಉಳಿಸಿಕೊಂಡಿದ್ದಾರೆ. ಕ್ರಿ.ಶ. 901ರಲ್ಲಿ ಸಿದ್ಧವಾದ ಒಂದು ಕೈಫಿಯತ್ತು ಆ ಕಾಲಕ್ಕೂ ಜಪಾನ್‍ನಲ್ಲಿ 2,861 ದೇವಾಲಯಗಳಿದ್ದುವೆಂದೂ 3,132 ದೇವತೆಗಳು ಪೂಜೆಗೊಳ್ಳುತ್ತಿದ್ದರೆಂದೂ ಹೇಳುತ್ತದೆ. ಅಂದಿನಿಂದ ಇಂದಿನವರೆಗೆ ಈ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಸಂಜೆ, ಮುಂಜಾನೆ, ಮಳೆ, ಗಾಳಿ, ನಿದ್ರೆ, ಜಾಗರ ಇಂಥ ಒಂದೊಂದು ಸ್ವಾಭಾವಿಕ ಕ್ರಿಯೆಗೂ ಇರುವ ದೇವತೆಗಳಲ್ಲದೆ ಪೌರಾಣಿಕ ದೇವತೆಗಳು, ವೀರರು, ಮರಣಾನಂತರ ದೇವತೆಗಳೆಂದು ಪರಿಗಣಿತರಾದರು. ಅದ್ಭುತ ವಸ್ತುಗಳು, ಪಶುಪ್ರಾಣಿಗಳು ಎಲ್ಲವೂ ಈ ಎಣಿಕೆಯಲ್ಲಿ ಸೇರುತ್ತವೆ. ಬೆಟ್ಟ ಗುಡ್ಡಗಳನ್ನು ಅವರು ದೇವತೆಗಳೆಂದೇ ಪೂಜಿಸುತ್ತಾರೆ. ಪೂಜೀಯಾಮಾ ಎನ್ನುವ ಬೆಟ್ಟ ಜಗತ್ಪ್ರಸಿದ್ಧವಾದುದು. ಇಷ್ಟು ಮಾತ್ರವಲ್ಲದೆ ಅನಿರ್ದಿಷ್ಟವಾದ ಕೇವಲ ಕಾಲ್ಪನಿಕವಾದ, ಅe್ಞÁತಸ್ವರೂಪವಾದ ಹಲವಾರು ದೇವತೆಗಳನ್ನು ಅವರು ನಂಬುತ್ತಾರೆ. ಷಿಂಟೋ ಪಂಥದವರು ಸ್ವರ್ಗಗರ್ಭನಾಥ (ಅಮೀ-ನೋ-ಮಿನಕ-ನುಷಿನೊ-ಮಿಕೋಟೋ) ಉತ್ತುಂಗಾದ್ಭುತಸಂಭವನಾಥ (ತಕಾಮಿ-ಮುಸುಬಿ-ನೊ-ಕಾಮಿ) ಮತ್ತು ದಿವ್ಯಸಂಭವಾದ್ಭುತದೇವ (ಕಾಮಿ-ಮುಸುಬಿ-ನೊ-ಕಾಮಿ) ಈ ಮೂರು ದೇವತೆಗಳನ್ನಷ್ಟೆ ಪೂಜೆ ಮಾಡುತ್ತಾರೆ. ಸ್ವರ್ಗನಾಥನಾದ ಕಾಮಿ ಸರ್ವಶ್ರೇಷ್ಟನಾದ ದೇವತೆಯೆಂದೂ ಇದರ ಮೂಲ ಏಕೇಶ್ವರವಾದವೆಂದೂ ಈ ಪಂಥದವರು ನಂಬುತ್ತಾರೆ. ಜಪಾನಿನ ಜನರಲ್ಲಿ ಪರಲೋಕದ ನಂಬಿಕೆ ವಿಸ್ತøತವಾಗಿದೆ. ಈಗಿನ ಚಕ್ರವರ್ತಿಮನೆತನದ ಮೂಲ ಸ್ತ್ರೀಯೊಂದಿಗೆ ತಾದಾತ್ಮ್ಯಭಾವವನ್ನು ಹೊಂದಿದ ಅಮತೆರಸು ಓಮಿಕಾಮಿ ಎಂಬ ದೇವತೆ ಸೂರ್ಯಾಣಿ. ನಮ್ಮಲ್ಲಿನ ಪೂಷನ ಸ್ತ್ರೀ ರೂಪ. ಈ ದೇವತೆ ತುಂಬ ಜನಪ್ರಿಯಳಾದವಳು. ಹಚಿಮನ್ ಎಂಬ ದೇವತೆ ಮೊದಲಿಗೆ ವೀರಯೋಧನಾಗಿದ್ದವ. ತೆನ್-ಜಿನ್ ಎಂಬ ಪ್ರಾಚೀನ ವಿದ್ವಾಂಸನೊಬ್ಬ ಈಗ ವಿದ್ಯಾಧಿದೇವತೆಯಾಗಿ ಪರಿಣಮಿಸಿದ್ದಾನೆ. ಸುಗ್ಗಿಗೆ ಒಡೆಯ ಇನರಿ ಎಂಬ ದೇವತೆ ; ನಾವಿಕರು ತಮ್ಮ ಪರ್ಯಟನೆಗಳಲ್ಲಿ ಕೊಂಪಿರ ಎಂಬ ದೇವತೆಯನ್ನು ಆರಾಧಿಸುತ್ತಾರೆ. ಜಪಾನಿನ ಚಕ್ರವರ್ತಿಯನ್ನೇ ದೇವತೆಯೆಂದು ಪೂಜಿಸುವ ಪಂಥವೂ ಪ್ರಚುರವಾಗಿದೆ. ಭೌದ್ಧಧರ್ಮದ ಪ್ರಭಾವದಿಂದ ಅಮಿತಾಭ (ಅಮಿದ) ಮಂಜುಶ್ರೀ (ಮೊಂಜು) ಮುಂತಾದ ದೇವತೆಗಳು ಕೂಡ ಜಪಾನಿನ ಜನಜೀವನದಲ್ಲಿ ನೆಲೆಸಿದ್ದಾರೆ. 

ಈಜಿಪ್ಟ್ ಜನ ನೂರಾರು ದೇವತೆಗಳನ್ನು ನಂಬಿದ್ದವರು. ಅವರ ಚಿತ್ರ ಲಿಪಿಯಲ್ಲಿ ದೇವರು ಎನ್ನುವುದನ್ನು ನಕ್ಷತ್ರದಗುರುತಿನಿಂದ ಸೂಚಿಸುತ್ತಿದ್ದರು. ಎಲ್ಲ ದೇವತೆಗಳನ್ನು ಸೂಚಿಸುವಾಗಲೂ ಈ ನಕ್ಷತ್ರವನ್ನು ಜೊತೆಗೆ ಸೇರಿಸುವ ಪದ್ಧತಿ ಇತ್ತು. ಸ್ತ್ರೀದೇವತೆಗಳನ್ನು ಸೂಚಿಸುವಾಗ ಉರಗ-ಸರ್ಪ ಚಿತ್ರವನ್ನು ಬಳಸುತ್ತಿದ್ದರು. ಪುರುಷ ದೇವತೆಗಳು ಶ್ಯೆನದ ಅವತಾರಗಳೆಂದೂ ಸ್ತ್ರೀ ದೇವತೆಗಳು ಸರ್ಪದ ಆವಿರ್ಭಾವಗಳೆಂದೂ ಅವರ ಕಲ್ಪನೆ. ಅವರ ಆರಾಧನೆಯ ಪುಣ್ಯವನ್ನು ಪಡೆದ ಮೂರು ಪಕ್ಷಿಗಳೆಂದರೆ ಹದ್ದು, ಐಬಿಸ್ ಮತ್ತು ಹಾಲಕ್ಕಿ. ತುಂಬಾ ಪ್ರಚಲಿತವಾದ ದೇವತಾಸೂಚಕ ಲಿಪಿಯೆಂದರೆ ಸಣ್ಣ ಕೊಡಲಿಯ (ಪರಶು) ಚಿತ್ರ. ದೇವರು ಎನ್ನುವ ಭಾವನೆಯಲ್ಲಿ ಈಜಿಪ್ಟ್ ಜನ ಕುಡಿಯುವುದು, ಹೊಡೆದು ಕಡಹುವುದು ಎಂಬ ಅರ್ಥವನ್ನೂ ಬೆಳೆಯುವುದು, ಉದ್ಧಾರವಾಗುವುದು, ನವಯೌವನ ಎಂಬ ಅರ್ಥವನ್ನೂ ಕಾಣುತ್ತಾರೆ. ದೇವರನ್ನು ಸನಾತನತಾರುಣ್ಯದಿಂದ ಕೂಡಿದವನೆಂದು ಇವರು ಬಣ್ಣಿಸುತ್ತಾರೆ. ಸಸ್ಯಸಂಪತ್ತು ಬೆಳೆದು ಆಳಿದರೂ ಲೋಕ ನಿತ್ಯಶ್ಯಾಮಲ ಎನ್ನುವ ಕಲ್ಪನೆ ಇವರದ್ದು. ಎಂದರೆ ಎಲ್ಲ ಈಜಿಪ್ಟ್ ದೇವತೆಗಳೂ ಅಜರಾಮರರಲ್ಲ ; ಕೆಲವರು ಮುಪ್ಪಡರಿತೀರಿಕೊಳ್ಳುತ್ತಾರೆ. ಈ ನಿತ್ಯನೂತನ ಧರ್ಮ ಓಸಿರಿಸ್ ಎಂಬ ದೇವತೆಗೆ ವಿಶಿಷ್ಟವಾದುದು. ಒಂದು ಕಾಲಕ್ಕೆ ಈ ಪ್ರದೇಶದಲ್ಲಿ ಏಕೇಶ್ವರವಾದವಿದ್ದಿತೆಂದು ತಜ್ಞರು ನಿರ್ಧರಿಸಿದ್ದಾರೆ. ಆದರೆ ಬರುಬರುತ್ತ ದೇವತೆಗಳ ಸಂಖ್ಯೆ ಮಿತಿ ಮೀರಿದಾಗ ಇವನ್ನು ವರ್ಗಗಳಲ್ಲಿ ಜೋಡಿಸುವ ಪ್ರಯತ್ನ ಮಾಡಿದರು. ಇಂಥ ಒಂದು ವರ್ಗದ ದೇವತೆಗಳೇ ಫೇರೊಗಳಾಗಿ ಈಜಿಪ್ಟನ್ನು ಆಳಿದವರು. ವಿವಿದ ಪ್ರದೇಶಗಳಲ್ಲಿ ವಿವಿಧ ದೇವತಾವರ್ಗಗಳು ಪೂಜೆಗೊಳ್ಳುತ್ತಿದ್ದರು. ಇಡೀ ರಾಷ್ಟ್ರಕ್ಕೆ ಸಮನಾದ ದೇವತೆಗಳು ಕಡಿಮೆ. ಇರಲೇ ಇಲ್ಲವೆಂದರೂ ಒಪ್ಪೀತು. ಈಜಿಪ್ಟಿನ ದೇವತೆಗಳಿಗೆ ಮನುಷ್ಯರ, ಪಶುಪಕ್ಷಿಗಳ, ಗಿಡಮರಗಳ ಆಕೃತಿಯಿರುತ್ತಿತ್ತು. ಕೆಲವೊಮ್ಮೆ ಕಲಾಕೃತಿಗಳಾಗಿಯೂ ದೇವತೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಅವುಗಳಿಗೆ ಮನುಷ್ಯರ ಸ್ವಭಾವವೂ ಇರುತ್ತಿತ್ತು; ಖಾದ್ಯ, ಪಾನೀಯ, ವಸತಿ, ವಸನ, ಆಸನ ಎಲ್ಲದರ ಅಗತ್ಯವೂ ಇರುತ್ತಿದ್ದವು. ದೇವತೆಗಳಿಗೆ ಭವ್ಯವಾದ ಮಂದಿರಗಳನ್ನು ಕಟ್ಟಿಸುತ್ತಿದ್ದರು. ದೇವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಭಾರ ಮನುಷ್ಯನದಾಗಿತ್ತು. ಈ ಭಾರವನ್ನು ಮನುಷ್ಯ ನಿರ್ವಹಿಸಿದಾಗಲೇ ದೇವರು ಮನುಷ್ಯನ ಮೇಲೆ ಪ್ರಸನ್ನವಾಗಿ ವರಗಳನ್ನು ನೀಡುತ್ತಿದ್ದ. ಕ್ಷುದೆ, ಪಿಪಾಸೆ, ಭಯ, ಸಂತೋಷ, ದುಃಖ ಎಲ್ಲವೂ ದೇವರಿಗೂ ಒದಗುತ್ತಿದ್ದುವು. ರಾಜರ ಮತ್ತು ಮನುಷ್ಯರ ಒಡೆಯನಾದ ರಾ ಎಂಬ ಸವಿತೃದೇವತೆ ಮುದುಕನೆಂದೇ ಕಲ್ಪನೆ ; ಅವನು ಜೀರ್ಣ, ದುರ್ಬಲ. ಎಡ್ಫುವಿನ ಹೋರಸ್ ಎಂಬ ಇನ್ನೊಬ್ಬ ದೇವತೆಯ ಸಹಾಯವಿಲ್ಲದೆ ಅವನು ತನ್ನ ಒಡೆತನವನ್ನು ನಿರ್ವಹಿಸಲಾರ. ಇವನು ಹಾವು ಕಚ್ಚಿ ವ್ಯಥೆಪಡುತ್ತಿದ್ದಾಗ ಐಸಿಸ್ ಎಂಬ ದೇವತೆಯಿಂದ ಗುಣಹೊಂದುತ್ತಾನೆ. ಓಸಿರಿಸ್ ಎಂಬ ದೇವತೆಗೂ ಅವನ ಸೋದರ ಸೆಟ್ ಎಂಬ ದೇವತೆಗೂ ಯುದ್ಧವಾಗಿ ಓಸಿರಿಸ್ ಕೊಲ್ಲಲ್ಪಡುತ್ತಾನೆ. ದೇವತೆಗಳು ರೋಗಿಷ್ಟರಾಗುವುದೂ ಉಂಟು. ಆಗ ಇತರ ದೇವತೆಗಳು ಚಿಕಿತ್ಸೆ ಮಾಡುತ್ತಾರೆ. ಐಸಿಸ್ ಪ್ರಬಲ ವೈದ್ಯದೇವತೆ. ಪ್ರಾರ್ಥನೆಗಳನ್ನು ಸಮರ್ಪಿಸುವುದರಿಂದ ದೇವತೆಗಳು ವಶರಾಗುತ್ತಾರೆಂಬ ಕಲ್ಪನೆಯೂ ಈಜಿಪ್ಟ್ ಧರ್ಮದಲ್ಲಿ ಮೂಡಿಬಂದಿದೆ.

ಗ್ರೀಕ್‍ಜನರ ದಾರ್ಶನಿಕ ನಿಲುವು ಪ್ರೌಢವಾದರೂ ಅವರ ಪ್ರಾಚೀನ ದೇವತಾಕಲ್ಪನೆಯಲ್ಲಿ ಈ ಪ್ರೌಢಿಮೆ ಕಂಡುಬರುವುದಿಲ್ಲ. ಗ್ರೀಕರು ಮುಖ್ಯವಾಗಿ ತಿಯೋಸ್ ಎಂಬ ಪದವನ್ನು ವೈಯುಕ್ತಿಕದೇವತೆ (ಜೀವನ ದೇವತೆ) ಎಂಬ ಅರ್ಥದಲ್ಲಿಯೂ ದೈಮಾನ್ ಎಂಬ ಪದವನ್ನು ಆಧ್ಯಾತ್ಮಿಕ ಶಕ್ತಿ ಎಂಬ ಅರ್ಥದಲ್ಲಿಯೂ ಬಳಸುತ್ತಾರೆ. ಅವರು ಬಹುದೇವತಾವಾದಿಗಳು. ಮನೆಗೊಂದುದೇವರು, ದೇಶಕ್ಕೊಂದು ದೇವರು ಕೇರಿಗೊಂದು ದೇವರು, ಎಂಬ ಕಲ್ಪನೆ ಅವರದು. ಬೆಟ್ಟಗುಡ್ಡಗಳನ್ನು ನದೀನಿರ್ಝರಗಳನ್ನು ದೇವತೆಗಳೆಂದು ಬಗೆದು ಪೂಜಿಸುತ್ತಿದ್ದರು. ಈ ದೇವತೆಗಳಲ್ಲೆಲ್ಲ ಪ್ರಚಂಡನಾದ ಸ್ಯೂಸ್ ಆಕಾಶದ ಒಡೆಯ, ಕಾರ್ಮೊಡಗಳಿಂದ ಮಳೆಗರೆಯುವಂತೆ ಮಾಡುವನು, ಸಂಸ್ಕøತದ ದ್ಯೌಃ (ವೇದವಾಙ್ಮಯದ ದೇವತೆ) ಎಂಬುದಕ್ಕೂ ಗ್ರೀಕಿನ ಸ್ಯೂಸ್‍ಗೂ ನಿಕಟ ಸಂಬಂಧವಿದೆ. ಡೊಡೋನಾ ಎಂಬ, ಕಾಡಿನ ಶಕ್ತಿಯಾದ ಈ ದೇವತೆ ಮುಂದೆ ಒಲಿಂಪಸ್ ಎಂಬ ಕಾಲ್ಪನಿಕ ಶಿಖರದ ಮೇಲಿರುತ್ತಿದ್ದ ಪರದೇವತೆಯಾದ. ಈತನ ಶಕ್ತಿ ದಿಯೋನೆ ಎಂಬ ಸ್ತ್ರೀ ದೇವತೆ. ದೇಶದೇಶಗಳಿಗೆ ತಿರುಗಾಡುತ್ತಿದ್ದ ಗ್ರೀಕ್ ಜನರ ಅಭಿಮಾನ ದೇವತೆ ಅಪೋಲೊ ಸೂರ್ಯನಿಗೆ ಸಂಬಂಧಪಟ್ಟ ಕಲ್ಪನೆ. ಹೀಗೇಯೆ ಮಿಂಚಿನ ದೇವತೆಯಾದ ಅತೀನೆ, ಆರ್ಟಿಮಿಸ್, ಹೀರಾ ಆಫ್ರೊಡಿಟೆ. ಹಿರಾಕ್ಲಿಸ್, ಪೋಸಿಡಾನ್ ಮುಂತಾದ ದೇವತೆಗಳು ಮೊದಲಿಗೆ ಅಲ್ಲಲ್ಲಿ ಕೆಲವು ಕುಲಗಳಿಂದ ಪೂಜೆಗೊಳ್ಳುತ್ತಿದ್ದವರು. ಗ್ರೀಕ್ ಸಂಸ್ಕøತಿಯ ಒಕ್ಕೂಟವಾದ ಅನಂತರ ಈ ಹಲವು ದೇವತೆಗಳು ಒಂದು ಗೋಷ್ಠಿಯಲ್ಲಿ ಸೇರಿದರು. ಆದರೂ ಕೆಲವು ದೇವತೆಗಳಿಗೆ ಕೆಲವು ಸ್ಥಳಗಳು ನಿರ್ದಿಷ್ಟವಾಗಿದ್ದವು. ನಿದರ್ಶನಕ್ಕೆ ಅಪೋಲೋಗೆ ತರ್ಮಾಪಲಿ, ಪೋಸಿಡಾನ್‍ಗೆ ಕಲೂರಿಯ, ಆರ್ಟಿಮಿಸ್‍ಗೆ ಈಟೋಲಿಯ, ಸ್ಯೂಸ್‍ಗೆ ಒಲಿಂಪಸ್ ಈ ಸ್ಥಳಗಳಿಗೆ ತಕ್ಕಂತೆ ಆಯಾ ದೇವತೆಗಳ ಸ್ವಭಾವವೂ ಮಾರ್ಪಟ್ಟವು. ಆದರೆ ಎಲ್ಲ ದೇವತೆಗಳಿಗೂ ಮನುಷ್ಯರ ಆಕೃತಿ. ಸ್ವಭಾವಗಳೇ ಇದ್ದುವು. ಒಂದೊಂದು ದೇವತೆಗೂ ಪುರಾಣದ ಹಿನ್ನೆಲೆಯನ್ನು ಕಲ್ಪಿಸಿದರು. ಮುಂದೆ ಈ ಎಲ್ಲ ದೇವತೆಗಳಿಗೂ ಸ್ಯೂಸ್‍ನೇ ಒಡೆಯನೆಂದೂ ದೇವಾಧಿದೇವನೆಂದೂ ಸರ್ವಶಕ್ತನೆಂದೂ ನಂಬಿದರು. ಜನಜೀವನದ ವ್ಯವಹಾರದಲ್ಲಿ ಸ್ಯೂಸ್, ಅತೀನೆ ಮತ್ತು ಅಪೋಲೊ ಇವರು ತ್ರಿಮೂರ್ತಿಗಳೆಂಬ ಕಲ್ಪನೆ ಸಿದ್ಧವಾಯಿತು. ದೇವರ ಆಣತಿಯನ್ನು ಜನ ಅರಿಯಲು ಸಲುವಾಗಿ ಡೊಡೋನಾ ಮತ್ತು ಡೆಲ್ಫಿ ಮುಂತಾದೆಡೆ ದಿವ್ಯವಾಣಿಗಳನ್ನು ಗ್ರಹಿಸಿ ಅರ್ಥ ಹೇಳುವ ವ್ಯವಸ್ಥೆ ಇತ್ತು. ಈ ದೇವತೆಗಳೆಲ್ಲ ಅಮರರು, ಸರ್ವದಾ ಸುಖಿಗಳು, ಅವರ ಆಹಾರ ಅಮೃತ (ಆ್ಯಂಬ್ರೋಸಿಯ). ಅವರು ದುರ್ದರ್ಶರು. ಆದರೆ ಹಲವಾರು ಛದ್ಮಗಳಿಂದ ಮನುಷ್ಯರಿಗೆ ಅವರು ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಹಕ್ಕಿಗಳಂತೆ ತೋರಿಬರುತ್ತಾರೆ. ಎಲ್ಲ ಶುಭವೂ ಅವರಿಂದಲೇ ಬರತಕ್ಕದ್ದು. ಆದರೆ ಪಾಪಮಾಡಿದರೆ, ಪ್ರತಿe್ಞÁಭಂಗವಾದರೆ, ಕ್ರೂರವರ್ತನೆಯಿದ್ದರೆ ಅವರು ಶಿಕ್ಷೆಯನ್ನು ವಿಧಿಸುತ್ತಾರೆ. ಜನಗಳು ನ್ಯಾಯದಿಂದ ನಡೆಯುವರೋ ಇಲ್ಲವೋ ಎಂದು ಪರಿಶೀಲಿಸಲು ಅವರು ಅಪರಿಚಿತರಂತೆ ಕಾಣಿಸಿಕೊಂಡು ನಗರಗಳಲ್ಲಿ ಸಂಚಾರಮಾಡುತ್ತಾರೆ. ಮನುಷ್ಯ ಮಾತ್ರದವ ಅವರೊಂದಿಗೆ ಸೆಣಸುವುದು ಸಾಧ್ಯವಿಲ್ಲ; ಸೆಣಸಿದರೆ ಅವನಿಗೆ ನರಕವೇ ಗತಿ. ಗ್ರೀಕ್ ದರ್ಶನ ಪ್ರಬಲವಾದ ಏಕೇಶ್ವರವಾದ ಸಿದ್ಧವಾಯಿತು.

ಟ್ಯೂಟಾನಿಕ್ ಜನರ ಕಲ್ಪನೆಗಳು ಯೂರೋಪ್ ಖಂಡದಲ್ಲೆಲ್ಲ ಪ್ರಚಲಿತವಾದುವು. ಇವರೇ ಗಾಡ್ (ಗಾಡ್, ಗಾಡ್ಜೆ, ಗುಪ್, ಗಾತ್) ಎಂಬ ಪದವನ್ನು ನಿರ್ಮಾಣ ಮಾಡಿದವರು. ಗಾಡ್ ಎಂದರೆ ಪ್ರತಿಕೃತಿ ಮೂರ್ತಿ ಚಿತ್ರ ; ಮೊದಲಿಗೆ ಟ್ಯೂಟನರಲ್ಲಿ ಮರಣ ಮತ್ತು ಗಾಳಿಯ ದೇವತೆ ಆಕಾಶ, ಮೋಡ ಗುಡುಗುಗಳ ದೇವತೆ ಮತ್ತು ಯುದ್ಧದ ದೇವತೆ ಎಂಬ ಮೂರು ದೇವತೆಗಳು ಆರಾಧನೆಗೊಳ್ಳುತ್ತಿದ್ದರು. ಈ ಮೂರು ಪುರುಷ ದೇವತೆಗಳೊಂದಿಗೆ ಫ್ರಿಯಾ ಎಂಬ ಸ್ತ್ರೀದೇವತೆಯೂ ಇರುತ್ತಿದ್ದಳು. ಮುಂದೆ ಡೋನಾರ್ (ಹರ್‍ಕ್ಯುಲಿಸ್ ಅಥವಾ ಜ್ಯುಪಿಟರ್), ವೋಡನ್ (ಮರ್‍ಕ್ಯುರಿ) ಮತ್ತು ಸ್ಯೂಟೈರ್ (ಮಾರ್ಸ್) - ಈ ತ್ರಿಮೂರ್ತಿಗಳು ಮೊದಲಿನ ತ್ರಿಮೂರ್ತಿಗಳಿಗೆ ಬದಲಾಗಿ ಮೈದಳೆದರು; ಫ್ರಿಯಾಫ್ರಿಗ್ (ವೀನಸ್) ಎಂಬುವಳು ಸ್ತ್ರೀ ದೇವತೆಯಾದಳು. ಈ ದೇವತಾಚತುಷ್ಟಯ ಬಹುಕಾಲ ಬಳಕೆಯಲ್ಲಿತ್ತು. ನಾರ್ಸ್ ಜನರಲ್ಲಿ ಫ್ರೆ (ಈತ ಪ್ರಮುಖವಾಗಿ ಸ್ವೀಡನ್ನಿನ ದೇವತೆ, ಇವನ ಮುಂದಿರ ಉಪ್ಸಲಾದಲ್ಲಿದೆ.) ಎಂದರೆ ಸ್ವಾಮೀ, ಬಾಲ್ಡರ್ ಎಂದರೆ ಜ್ಯೋತಿ, ಹೈಮ್‍ದಲ್ರ್ ಎಂದರೆ ಜಗಜ್ಯೋತಿ, ಲೋಕಿ ಎಂದರೆ ರಕ್ಷಕ ಮುಂತಾದ ಪರುಷದೇವತೆಗಳೂ ಫ್ರೆಂರ್ಜುಂ (ಪ್ರೇನ ಸೋದರಿ), ಗ್ನ (ಪಿಫ್ರಿಗ್‍ನ ದೂತಿ), ಸಾಗ (ವಿದ್ಯಾಭಿಮಾನದೇವತೆ), ಸ್ನೋತ್ರ (ಸ್ತ್ರೀಯರಿಗೆ ವರಪ್ರದೆ), ಸೋಪ್ನ್ (ಪ್ರಿಯಜನಗಳ ಅಭಿಮಾನ ದೇವತೆ), ಲೋಫ್ನ್ (ದೇವತೆಗಳಿಗೂ ಮನುಷ್ಯರಿಗೂ ನಡುವೆ ಸಂಧಾನ ಮಾಡುವವಳು), ಹ್ಲಿನ್ (ಕಷ್ಟದ ಸಮಯದಲ್ಲಿ ಕಾಪಾಡುವ ದೇವತೆ) - ಮುಂತಾದ ಸ್ತ್ರೀ ದೇವತೆಗಳೂ ಪೂಜೆಗೊಳ್ಳುತ್ತಿದ್ದರು. ಇವರಲ್ಲಿ ಕುಟುಂಬದ ವ್ಯವಹಾರಗಳನ್ನೇ ಅನುಸರಿಸಿ ಕಲ್ಪಿತರಾದ ದೇವತೆಗಳು ಹೆಚ್ಚು.

ಹೀಗೆ ಜಗತ್ತಿನಲ್ಲಿ ಹಲವಾರು ಜನಾಂಗಗಳು ದೇವರನ್ನು ಹಲವಾರು ಬಗೆಗಳಲ್ಲಿ ಕಲ್ಪಿಸಿಕೊಂಡಿದ್ದಾರೆ. ಎಲ್ಲ ಕಲ್ಪನೆಗಳಿಗೂ ಮೂಲಭೂತವಾಗಿ ಮನುಷ್ಯನ ಅಸಹಾಯಕತೆ, ಮನುಷ್ಯನ ಮಿತಿಯನ್ನು ಮೀರಿದ ತತ್ತ್ವವೊಂದನ್ನು ಒಲಿಸಿಕೊಂಡರೆ ಆಗುವ ಪ್ರಯೋಜನ ಇವು ನಿಂತಿವೆ. ದೇವರ ಕಲ್ಪನೆಯಲ್ಲಿ ಮನುಷ್ಯನ e್ಞÁನದ ಮಿತಿಯೂ ಕಾಣಿಸುತ್ತದೆ. ದೇವರು ಮನುಷ್ಯನನ್ನು ವೈಯಕ್ತಿಕವಾಗಿಯೂ ಸಾಂಘಿಕವಾಗಿಯೂ ಕಾಪಿಡಬಲ್ಲವ. ಮನುಷ್ಯನ ವ್ಯವಹಾರವನ್ನೂ ಪ್ರಕೃತಿಯ ಪ್ರಸಂಗಗಳನ್ನೂ ನಿಯಂತ್ರಣ ಮಾಡಬಲ್ಲವ. ಮನುಷ್ಯನ ಆರಾಧನೆಯಿಂದ ತುಷ್ಟನಾಗುವ - ಎಂಬ ಕಲ್ಪನೆಗಳು ಎಲ್ಲ ದೇಶದ ಧರ್ಮಗಳಲ್ಲಿಯೂ ಕಾಣುವ ಸಮಾನ ಲಕ್ಷಣಗಳು. ಸುಖ ಬೇಕು, ಕಷ್ಟ ಬೇಡ ಎಂಬ ಸಹಜ ಪ್ರವೃತ್ತಿಗೆ ಪೂರಕವಾಗಿ ದೇವರ, ದೇವತೆಗಳ ಕಲ್ಪನೆಗಳು ಸಿದ್ಧವಾಗಿವೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ